Putturu: ‘ಪುತ್ತಿಲಪರಿವಾರ-ಮೋದಿಪರಿವಾರ’ ಜಂಟಿ ಯೋಜನೆ 4 ಲಕ್ಷ ಮತಗಳ ಅಂತರದಲ್ಲಿ ಬ್ರಿಜೇಶ್ ಗೆಲುವಿನ ಸಂಕಲ್ಪ
ಪುತ್ತೂರು: ಕೊನೆಗೂ ‘ಪುತ್ತಿಲ’ ಪಾಲಿಗೆ ಬಿಜೆಪಿಯ ಬಾಗಿಲು ತೆರೆದಿದೆ. ಕಳೆದ ವಿಧಾನಸಭಾ ಚುನಾವಣೆಯ ಹಂತದಿಂದ ಈ ತನಕ ಪುತ್ತೂರು ಬಿಜೆಪಿ ಪಾಲಿಗೆ ‘ವರ್ಜ್ಯ’ವಾಗಿದ್ದ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿಯೇ ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ಪುತ್ತಿಲಪರಿವಾರ- ಬಿಜೆಪಿ ನಡುವನ ಪ್ರಕರಣ ಸುಖಾಂತ್ಯಗೊಂಡಂತಾಗಿದೆ.
ಬೆಂಗಳೂರಿನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ಪುತ್ತೂರಿಗೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ ಮಾಧ್ಯಮಗಳೊಂದಿಗೆ ಮಾತನಾಡಿ, ದಕ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರನ್ನು 4 ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವ ಸಂಕಲ್ಪ ತೊಟ್ಟಿದ್ದೇವೆ. ಈ ನಿಟ್ಟಿನಲ್ಲಿ ಪುತ್ತಿಲ ಪರಿವಾರ-ಮೋದಿ ಪರಿವಾರ ಜಂಟಿಯಾಗಿ ಕೆಲಸ ಮಾಡುವ ಮೂಲಕ ಮೋದಿ ನೇತೃತ್ವದ ಸದೃಢ ಆಡಳಿತ ಬರಬೇಕಾದ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಾರ್ವಭೌಮತೆಗೆ ಧಕ್ಕೆಯಾಗದ ರೀತಿಯಲ್ಲಿ ದೇಶದ ಎಲ್ಲಾ ಜನ ಅವರ ಪರವಾಗಿ ನಿಲ್ಲಬೇಕಾಗಿದೆ. ಮುಂದಿನ 10 ವರ್ಷಗಳ ಕಾಲ ಮೋದಿ ಅವರ ನಾಯಕತ್ವ ದೇಶಕ್ಕೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಕ್ಯಾ. ಬ್ರಿಜೇಶ್ ಚೌಟ ಅವರ ಗೆಲುವು ದಕ ಲೋಕಸಭಾ ಕ್ಷೇತ್ರದಲ್ಲಿ ಬಹಳ ಮುಖ್ಯವಾಗಿದೆ. ಅವರ ಗೆಲುವಿಗಾಗಿ ಪುತ್ತಿಲ ಪರಿವಾರ ಹಾಗೂ ಮೋದಿ ಪರಿವಾರ ಜತೆಯಾಗಿ ಕೆಲಸ ಮಾಡಲಿವೆ. ಆ ಮೂಲಕ ಈ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ವ್ಯವಸ್ಥೆ ಮಾಡುವುದು ನಮ್ಮ ಗುರಿಯಾಗಿದೆ ಎಂದರು. ಬಿಜೆಪಿಗೆ ಸೇರ್ಪಡೆಗೊಂಡು ಬಂದ ಅರುಣ್ ಕುಮಾರ್ ಪುತ್ತಿಲ ಅವರನ್ನು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿ ಸ್ವಾಗತಿಸಿದರು.