Putturu: ಮಹಿಳೆಗೆ ಹಲ್ಲೆ-ಬಟ್ಟೆ ಹರಿದು ಜೀವಬೆದರಿಕೆ
ಪುತ್ತೂರು: ಮಹಿಳೆಯೊಬ್ಬರಿಗೆ ಅವಾಚ್ಯ ಶಬ್ಧಗಳಿಂದ ಬೈದು,ದೂಡಿ ಹಾಕಿ ಕಾಲಿನಿಂದ ತುಳಿದು ಹಲ್ಲೆ ನಡೆಸಿ, ಮಾನಭಂಗ ಮಾಡುವ ಉದ್ದೇಶದಿಂದ ಮೈಮೇಲಿನ ಬಟ್ಟೆಯನ್ನು ಹರಿದು ಹಾಕಿ ಜೀವಬೆದರಿಕೆಯೊಡ್ಡಿದ ಘಟನೆ ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದಲ್ಲಿ ನಡೆದಿದೆ.
ಇಚ್ಲಂಪಾಡಿ ಗ್ರಾಮದ ಅಲಂಗ ನಿವಾಸಿ ರೋಸಮ್ಮ (66) ಹಲ್ಲೆಗೊಳಗಾದವರು. ಕಡಬ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ರೋಸಮ್ಮ ಅವರು ಆರೋಪಿ ಎಂ.ಎಂ.ತೋಮಸ್ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಾನು ಭಾನುವಾರ ಮಧ್ಯಾಹ್ನ ದನವನ್ನು ಬಿಚ್ಚಿ ಕಟ್ಟಲು ತನ್ನ ಜಮೀನಿನ ಪಕ್ಕದಲ್ಲಿರುವ ಪಂಚಾಯಿತಿ ರಸ್ತೆಗೆ ಹೋದಾಗ ಅಲ್ಲಿದ್ದ ಆರೋಪಿ ಎಂ.ಎಂ.ತೋಮಸ್ ಎಂಬಾತ ತನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ದೂಡಿ ಹಾಕಿ ಕಾಲಿನಿಂದ ಹೊಟ್ಟೆ ಮತ್ತು ಬೆನ್ನಿನ ಭಾಗಕ್ಕೆ ತುಳಿದು ಹಲ್ಲೆ ನಡೆಸಿ, ಮಾನಭಂಗ ಮಾಡುವ ಉದ್ದೇಶದಿಂದ ತಾನು ಧರಿಸಿದ್ದ ಮೈಮೇಲಿದ್ದ ಎದೆಯ ಭಾಗದ ಮತ್ತು ಹಿಂಬದಿ ಭಾಗದ ಬಟ್ಟೆಯನ್ನು ಹರಿದು ಹಾಕಿ ಜೀವಬೆದರಿಕೆಯೊಡ್ಡಿರುವುದಾಗಿ ರೋಸಮ್ಮ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಆರೋಪಿಯ ಈ ಕೃತ್ಯದ ವೇಳೆ ತಾನು ಬೊಬ್ಬೆ ಹೊಡೆದಿದ್ದು, ಬೊಬ್ಬೆ ಕೇಳಿ ಮನೆಯಲ್ಲಿದ್ದ ಪುತ್ರ ಸ್ಥಳಕ್ಕೆ ಬರುತ್ತಿದ್ದಂತೆಯೇ ಆರೋಪಿ ತೋಮಸ್ ತಾನು ತಂದಿದ್ದ ಕತ್ತಿಯನ್ನು ತೋರಿಸಿ, ಅವಾಚ್ಯ ಶಬ್ಧಗಳಿಂದ ಬೈದು ‘ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನೀವು ಒಂದು ವಾರವೂ ಬದುಕಿ ಉಳಿಯುವುದಿಲ್ಲ’ ಎಂದು ಜೀವ ಬೆದರಿಕೆಯೊಡ್ಡಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.