Mangalore: ಖಾಸಗಿ ವ್ಯಕ್ತಿಗಳಿಂದ ವ್ಯಾಪಕ ಭೂಸ್ವಾಧೀನ: ಜಿಲ್ಲಾಧಿಕಾರಿಗಳಿಗೆ ಮನವಿ

Mangalore: ಖಾಸಗಿ ವ್ಯಕ್ತಿಗಳಿಂದ ವ್ಯಾಪಕ ಭೂಸ್ವಾಧೀನ: ಜಿಲ್ಲಾಧಿಕಾರಿಗಳಿಗೆ ಮನವಿ


ಮಂಗಳೂರು: ಮುನ್ನೂರು, ಬೆಳ್ಮ, ಅಂಬ್ಲಮೊಗರು ಗ್ರಾಮಗಳಲ್ಲಿ ಖಾಸಗಿ ವ್ಯಕ್ತಿಗಳಿಂದ ಕಳೆದ ಹಲವು ಸಮಯಗಳಿಂದ ವ್ಯಾಪಕ ಭೂಸ್ವಾಧೀನ ನಡೆಯುತ್ತಿದ್ದು, ಆ ಪ್ರದೇಶಗಳಲ್ಲಿ ಉಂಟಾಗಿರುವ ತೊಂದರೆ, ಆತಂಕಗಳ ಕುರಿತು ಕ್ರಷಿ ಭೂಮಿ ಸಂರಕ್ಷಣಾ ಹೋರಾಟ ಸಮಿತಿಯ ನೇತೃತ್ವದಲ್ಲಿ ಮಾ.18 ರಂದು ದ.ಕ. ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಲಾಯಿತು.

ಉಳ್ಳಾಲ ತಾಲೂಕಿನ ಮುನ್ನೂರು, ಬೆಳ್ಮ, ಅಂಬ್ಲಮೊಗರು ಗ್ರಾಮಗಳು ಕೃಷಿ ಪ್ರಧಾನ ಗ್ರಾಮಗಳಾಗಿರುವುದು ಮಾತ್ರವಲ್ಲ, ಕೃಷಿ ಬಿಕ್ಕಟ್ಟಿನ ಈ ಸಂದರ್ಭದಲ್ಲಿಯೂ ವ್ಯಾಪಕ ಕೃಷಿ ಚಟುವಟಿಕೆಗಳು ಇಂದಿಗೂ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ಗ್ರಾಮದ ಕೃಷಿ ಭೂಮಿಗಳನ್ನು ಖಾಸಗಿ ವ್ಯಕ್ತಿಗಳು ಅನುಮಾನಾಸ್ಪದ ರೂಪದಲ್ಲಿ ಖರೀದಿಸತೊಡಗಿದ್ದಾರೆ. ಏಜಂಟರು, ಸ್ಥಳೀಯ ಮಧ್ಯವರ್ತಿಗಳು, ಖಾಸಾಗಿ ಸಂಸ್ಥೆಗಳ ಪ್ರತಿನಿಧಿಗಳು ಎಂದು ಹೇಳಲ್ಪಟ್ಟವರು ಇದರಲ್ಲಿ ಪ್ರಮುಖರು. ಹೀಗೆ ಸುಮಾರು ಇನ್ನೂರು ಎಕರೆಯಷ್ಟು ಕೃಷಿ ಭೂಮಿ ಈಗಾಗಲೇ ಮಾರಾಟವಾಗಿದೆ. ಬಲಾಢ್ಯ ಲಾಬಿಯೊಂದು ಈ ರೀತಿ ಏಜಂಟರನ್ನು ಮುಂದಿಟ್ಟು ಭೂಮಿಯನ್ನು ಖರೀದಿಸುತ್ತಿದೆ ಎಂಬ ಗುಸು ಗುಸು ಮಾತುಗಳು ಕೇಳಲ್ಪಡುತ್ತಿವೆ. ಹೀಗೆ ಒಂದೇ ಭಾಗದಲ್ಲಿ ಭೂಮಿಯನ್ನು ಖರೀದಿಸುತ್ತಿರುವ ಉದ್ದೇಶ ನಿಗೂಢವಾಗಿದೆ. 

ಈ ಮೂರು ಗ್ರಾಮಗಳಲ್ಲಿ ಒಂದಕ್ಕೊಂದು ಅಂಟಿಕೊಂಡಿರುವ ಜಮೀನನ್ನು ಖರೀದಿಸುವಾಗ ಅಮಾಯಕ ರೈತರನ್ನು ವಿವಿಧ ರೀತಿಯಲ್ಲಿ ಮೋಸಗೊಳಿಸಲಾಗುತ್ತಿದೆ. ಇತ್ತೀಚೆಗೆ ಅಭಿವೃದ್ದಿಯ ನಾಗಾಲೋಟದಲ್ಲಿರುವ ದೇರಳಕಟ್ಟೆಗೆ ತಾಗಿಕೊಂಡಿರುವ ಈ ಗ್ರಾಮಗಳ ಕೃಷಿ ಭೂಮಿಗೆ ಯಾವುದೇ ಬೆಲೆಯಿಲ್ಲ, ಕೃಷಿಯಲ್ಲದ ಅನ್ಯ ಉದ್ದೇಶಗಳಿಗೆ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ನಂಬಿಸಿ ಆತ್ಯಂತ ಅಗ್ಗದ ದರದಲ್ಲಿ ಏಜಂಟರು ಭೂಮಿಯನ್ನು ಮಾರಾಟ ಮಾಡಿಸಿದ್ದಾರೆ. ಕೆಲವೆಡೆ ರಸ್ತೆ ಸಂಪರ್ಕ ಇಲ್ಲ, ಅದರಿಂದ ನಿಮ್ಮ ಭೂಮಿ ಕೊನೆಗೆ ಯಾರಿಗೂ ಬೇಡದಂತಾಗುತ್ತದೆ ಎಂದು ಆತಂಕ ಹುಟ್ಟಿಸಿ ಮಾರಾಟ ಮಾಡಿಸಿರುತ್ತಾರೆ. ಇನ್ನು ದಾಖಲೆಗಳು ಸರಿ ಇಲ್ಲದ, ಕುಟುಂಬಗಳಲ್ಲಿ ತಕರಾರು ಇದ್ದ ಜಮೀನುಗಳನ್ನು ವಿವಿಧ ರೀತಿಯ ತಂತ್ರ, ಆಮಿಷಗಳ ಮೂಲಕ ತಮ್ಮ ಪಾಲು ಮಾಡಿಕೊಂಡಿರುತ್ತಾರೆ. ಕೆಲವೆಡೆ ದಶಕಗಳ ಹಿಂದೆ ಕೈ ಬರಹದ ಮೂಲಕ ಖರೀದಿ ಮಾಡಿದ ಗ್ರಾಮಸ್ಥರ ಭೂಮಿಯನ್ನು ಅವರ ಗಮನಕ್ಕೆ ತಾರದೆ ಮೂಲ ಮಾಲಕರಿಂದ ಖರೀದಿ ಮಾಡಿ ವಂಚಿಸಿದ್ದಾರೆ ಎಂಬ ಆರೋಪವೂ ಇದೆ. 

ಮಾರಾಟ ಮಾಡುವುದಿಲ್ಲ ಎಂದು ಹಠ ಹಿಡಿದವರನ್ನು ಬೆದರಿಸಿ, ರಸ್ತೆ ಸಂಪರ್ಕ ಕಡಿತದ ಭೀತಿ ಹುಟ್ಟಿಸಿ ಖರೀದಿ ಮಾಡುವ ಘಟನೆಗಳೂ ನಡೆದಿದೆ. ಈಗಾಗಲೇ ಮಾರಾಟಗೊಂಡಿರುವ ಜಮೀನಿನ ನಡುವೆ ಬಾಕಿ ಉಳಿದಿರುವ ಜಮೀನಿನ ಮಾಲಕರ ಸ್ಥಿತಿ ಅತಂತ್ರವಾಗಿದೆ. ಇಷ್ಟಲ್ಲದೆ, ಇನ್ನೂರು ಎಕರೆಗೂ ವಿಶಾಲವಾಗಿರುವ ರೈತರಿಂದ ವಿವಿಧ ತಂತ್ರಗಳ ಮೂಲಕ ಬಲಾಢ್ಯ ಲಾಭಿಗಳು ಖರೀದಿ ಮಾಡಿರುವ ಜಮೀನುಗಳ ಒಳಗಿರುವ ಸರಕಾರಿ ಜಮೀನು, ರಸ್ತೆ, ನೀರು ಹರಿಯುವ ಕಾಲುವೆಗಳನ್ನು ಅತಿಕ್ರಮಿಸಲಾಗುತ್ತಿದೆ. ಕಾಲುವೆಗಳನ್ನು ಮುಚ್ಚಲಾಗುತ್ತಿದೆ. ಗುಡ್ಡಗಳನ್ನು ಸಮತಟ್ಟುಗೊಳಿಸಲಾಗುತ್ತಿದೆ.ನೂರಾರು ಟಿಪ್ಪರ್‌ಗಳಲ್ಲಿ ಮಣ್ಣನ್ನು ಸಾಗಿಸಲಾಗುತ್ತಿದೆ. 

ಇದೆಲ್ಲವನ್ನು ನಿಯಮ ಬಾಹಿರವಾಗಿ ರಾಜಾರೋಷವಾಗಿ ನಡೆಸಲಾಗುತ್ತಿದೆ. ಈ ಕುರಿತು ಸ್ಥಳೀಯ ಪಂಚಾಯತ್ ಗಳಿಗೆ ಯಾವುದೇ ಮಾಹಿತಿ ಇಲ್ಲ, ಅಥವಾ ಮಾಹಿತಿ ಇಲ್ಲದಂತೆ ವರ್ತಿಸಲಾಗುತ್ತಿದೆ. ಇದೆಲ್ಲದರಿಂದ ಈ ಮೂರೂ ಗ್ರಾಮಗಳಲ್ಲಿ ಅಸಹನೀಯ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಹೋರಾಟ ಸಮಿತಿಯು ಗಂಭೀರವಾಗಿ ಆರೋಪಿಸಿದೆ.

ಕೃಷಿ ಭೂಮಿ ಸಂರಕ್ಷಣಾ ಹೋರಾಟ ಸಮಿತಿಯ ಗೌರವ ಸಂಚಾಲಕರಾದ ಕ್ರಷ್ಣಪ್ಪ ಸಾಲ್ಯಾನ್, ಸಂಚಾಲಕರಾದ ಜಯಂತ ನಾಯಕ್, ಗೌರವ ಸಲಹೆಗಾರರಾದ ಕೆ. ಯಾದವ ಶೆಟ್ಟಿ, ಮುನೀರ್ ಕಾಟಿಪಳ್ಳ, ಸುನಿಲ್ ಕುಮಾರ್ ಬಜಾಲ್, ಇತರ ಮುಖಂಡರಾದ ಜಯಂತ ಅಂಬ್ಲಮೊಗರು, ಇಬ್ರಾಹಿಂ ಮದಕ, ಸುಂದರ ಅಂಬ್ಲಮೊಗರು ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article