Udupi: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಚುನಾವಣೆಗೆ ಸಜ್ಜು

Udupi: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಚುನಾವಣೆಗೆ ಸಜ್ಜು


ಉಡುಪಿ: ಕರಾವಳಿ ಮತ್ತು ಮಲೆನಾಡು ವ್ಯಾಪ್ತಿ ಹೊಂದಿರುವ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕಾಗಿ ಸಜ್ಜುಗೊಂಡಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚುನಾವಣೆ ಆಯೋಗದ ಸೂಚನೆಯಂತೆ ನೀತಿ ಸಂಹಿತೆ ತಕ್ಷಣದಿಂದ ಜಾರಿಗೆ ಬಂದಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ತಿಳಿಸಿದರು.

ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾಪು ಮತ್ತು ಕಾರ್ಕಳ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ತರೀಕೆರೆ ಮತ್ತು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ 15,72,958 ಮಂದಿ ಮತದಾರರಿದ್ದಾರೆ ಎಂದರು.

ಚುನಾವಣೆ ಅಧಿಸೂಚನೆಯನ್ನು ಮಾ. 28ರಂದು ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಏ. 4ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಏ. 5ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏ. 8 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಏ. 26ರಂದು ಚುನಾವಣೆ ನಡೆಯಲಿದ್ದು, ಜೂ. 4ರಂದು ಮತ ಎಣಿಕೆ ನಡೆಯಲಿದೆ. ಜೂ. ೬ರ ವರೆಗೆ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.

ಕ್ಷೇತ್ರದಲ್ಲಿ ಒಟ್ಟು 1842 ಮತಗಟ್ಟೆಗಳಿವೆ. ಉಡುಪಿ ಜಿಲ್ಲೆಯ ಕುಂದಾಪುರ 222, ಉಡುಪಿ 226 ಹಾಗೂ ಕಾಪು ಮತ್ತು ಕಾರ್ಕಳ ತಲಾ 209 ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ 256, ಮೂಡಿಗೆರೆ 231, ಚಿಕ್ಕಮಗಳೂರು 261 ಮತ್ತು ತರೀಕೆರೆಗಳಲ್ಲಿ 228 ಮತಗಟ್ಟೆಗಳಿವೆ. 

ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತಲಾ 4 ಮಂದಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. 15 ಮಂದಿ ನೋಡೆಲ್ ಅಧಿಕಾರಿಗಳು ಕಾರ‍್ಯನಿರ್ವಹಿಸುವರು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಕ್ಷೇತ್ರದಲ್ಲಿ 17959 ವಿಕಲಚೇತನರು, 21521 ಹಿರಿಯ ನಾಗರಿಕರು ಮತ್ತು 29909 ಯುವ ಮತದಾರರಿದ್ದಾರೆ.  100 ವರ್ಷ ಮೇಲ್ಪಟ್ಟ 536 ಮಂದಿ ಇದ್ದು, ಆ ಪೈಕಿ 331 ಮಂದಿ ಮಹಿಳೆಯರು ಮತ್ತು 205 ಪುರುಷರಿದ್ದಾರೆ. 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು 40 ಶೇ. ಮೇಲ್ಪಟ್ಟ ವಿಕಲಚೇತನರು ಅಪೇಕ್ಷಿಸಿದಲ್ಲಿ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೂ ಮತಗಟ್ಟೆಗೇ ಬಂದು ಮತ ಚಲಾಯಿಸುವಲ್ಲಿ ಒಲವು ತೋರಿಸುವುದು ಪಾರದರ್ಶಕ ಮತದಾನ ಪ್ರಕ್ರಿಯೆಗೆ ಪೂರಕವಾಗುತ್ತದೆ ಎಂದು ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದರು. ಚುನಾವಣೆ ಪ್ರಕ್ರಿಯೆಗಳಲ್ಲಿ ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಬಳಸುವಂತಿಲ್ಲ ಎಂದು ತಿಳಿಸಿದರು.

ಪಾರದರ್ಶಕ ಮತ್ತು ಶಾಂತಿಯುತ ಮತದಾನಕ್ಕಾಗಿ ಚುನಾವಣೆ ಆಯೋಗ ಸಿದ್ಧಪಡಿಸಿರುವ ಆಪ್‌ಗಳನ್ನು ಬಳಸುವಂತೆ ಸೂಚಿಸಿದ ಜಿಲ್ಲಾಧಿಕಾರಿ ‘ಪ್ರತಿಶತ 100ರಷ್ಟು ಮತದಾನ- ಉಡುಪಿ ಜಿಲ್ಲೆ ವಾಗ್ದಾನ’ ಶೀರ್ಷಿಕೆಯಡಿ ಶ್ರಮಿಸುತ್ತಿದೆ ಎಂದರು.

ಮಾದರಿ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಖಾಸಗಿ ಹಾಗೂ ಸಾರ್ವಜನಿಕ ಮತ್ತು ಧಾರ್ಮಿಕ ಕಾರ್ಯಕ್ರಮ ಆಯೋಜನೆ, ಬ್ಯಾನರ್ ಅಳವಡಿಕೆ ಇತ್ಯಾದಿಗಳಿಗೆ ಸುವಿಧಾ ಆಪ್ ಮೂಲಕ ಅನುಮತಿ ಕಡ್ಡಾಯ ಎಂದರು.


ಚೆಕ್‌ಪೋಸ್ಟ್ ಸ್ಥಾಪನೆ:

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಮಾತನಾಡಿ, ಜಿಲ್ಲೆಯ ಗಡಿಭಾಗದಲ್ಲಿ ಒಟ್ಟು 14 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗುತ್ತದೆ. ಶಿರೂರು, ಕೊಲ್ಲೂರು, ಹೊಸಂಗಡಿ, ಸಾಬ್ರಕಟ್ಟೆ, ಗುಡ್ಡೆಯಂಗಡಿ/ ಮಣಿಪುರ ಕ್ರಾಸ್, ಉದ್ಯಾವರ, ಹೆಜಮಾಡಿ, ಪಲಿಮಾರು, ಮಾಳ, ಮುಂಡ್ಕೂರು (ಸಚ್ಚರಿಪೇಟೆ), ನಾಡ್ಪಾಲು ( ಸೋಮೆಶ್ವರ), ಮುಡಾರು ಬಜಗೋಳಿ, ಸಾಣೂರು, ಹೊಸ್ಮಾರು/ ನಲ್ಲೂರಿನಲ್ಲಿ ಚೆಕ್‌ಪೋಸ್ಟ್ ತೆರೆಯಲಾಗುತ್ತದೆ ಎಂದರು.

ಚುನಾವಣೆ ಪ್ರಕ್ರಿಯೆಗಾಗಿ 6 ಡಿವೈಎಸ್ಪಿ, 14 ಪೋಲಿಸ್ ಇನ್ಸ್‌ಪೆಕ್ಟರ್, 51 ಪಿ.ಎಸ್.ಐ, 101 ಎ.ಎಸ್.ಐ, 480 ಹೆಡ್ ಕಾನ್ಸ್‌ಸ್ಟೇಬಲ್, 622 ಪೋಲಿಸ್ ಕಾನ್ಸ್‌ಸ್ಟೇಬಲ್, 588 ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ, ಜಿ.ಪಂ ಸಿಇಓ ಪತ್ರೀಕ್ ಬಾಯಲ್ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article