Udupi: ಮಂದಿರ ಕಟ್ಟಿದರೆ ಸಾಲದು ಉಳಿಸಿಕೊಳ್ಳುವುದು ಮುಖ್ಯ

Udupi: ಮಂದಿರ ಕಟ್ಟಿದರೆ ಸಾಲದು ಉಳಿಸಿಕೊಳ್ಳುವುದು ಮುಖ್ಯ


ಉಡುಪಿ: ಅಸಂಖ್ಯಾತ ಹಿಂದೂಗಳ ನಿಡುಗಾಲದ ಹೆಬ್ಬಯಕೆಯಾದ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಮಂದಿರ ನಿರ್ಮಾಣವಾದರೆ ಸಾಲದು, ಅದನ್ನು ಉಳಿಸಿಕೊಳ್ಳುವುದು ಮುಖ್ಯ. ಹಿಂದೂಗಳು ಹಿಂದೂಗಳಾಗಿ ಉಳಿದರಷ್ಟೇ ಶ್ರೀರಾಮ ಮಂದಿರ ಆಚಂದ್ರಾರ್ಕವಾಗಿ ಉಳಿಯುತ್ತದೆ ಎಂದು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.

ಅಯೋಧ್ಯೆಯ ನೂತನ ಭವ್ಯ ರಾಮ ಮಂದಿರದಲ್ಲಿ ಶ್ರೀ ಬಾಲರಾಮನ ಪ್ರತಿಷ್ಠೆ ತರುವಾಯ 48 ದಿನಗಳ ಪರ‍್ಯಂತ ಮಂಡಲೋತ್ಸವವನ್ನು ವೈಭವದಿಂದ ನಡೆಸಿದ ಹಿನ್ನೆಲೆಯಲ್ಲಿ ಭಾನುವಾರ ಪರ‍್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ವತಿಯಿಂದ ಶ್ರೀರಾಮ ಭಕ್ತರ ಪರವಾಗಿ ನಡೆದ ಅಭಿನಂದನ ಕಾರ‍್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಹಿಂದೂ ಸಂಸ್ಕೃತಿ ಸಂಸ್ಕಾರಗಳನ್ನು ಬೆಳೆಸಿ, ಉಳಿಸಿಕೊಳ್ಳಬೇಕು. ನಮ್ಮ ಮಕ್ಕಳಿಗೆ ಅದನ್ನು ಕಲಿಸಬೇಕು. ಅದು ಮನೆಯಿಂದಲೇ ಆರಂಭವಾಗಬೇಕು. ಸಂಸ್ಕೃತಿಯ ಪರಿಚಯ ಮಕ್ಕಳಿಗಿಡುವ ಹೆಸರಿನಿಂದಲೇ ಶುರುವಾಗಬೇಕು. ತಮ್ಮ ಹೆಸರಿನ ಅರ್ಥ ತಿಳಿಯುವಂತಾಗಬೇಕು. ಅನರ್ಥದ ಹೆಸರಿಟ್ಟಿದ್ದಲ್ಲಿ ಅದನ್ನು ಬದಲಾಯಿಸಲು ಅವಕಾಶ ಇದೆ. ಹೆತ್ತ ತಾಯಿಯಂತಿರುವ ನಮ್ಮ ಸಂಸ್ಕೃತಿಯನ್ನು ಉಪೇಕ್ಷಿಸಿ ಪಾಶ್ಚಾತ್ಯ ಸಂಸ್ಕೃತಿಯನ್ನು ಒಪ್ಪಿಕೊಳ್ಳುವುದು ಹೆತ್ತ ತಾಯಿಯನ್ನು ಅವಮಾನಿಸಿದಂತೆ ಎಂದರು. 

ರಾಮ ಮಂದಿರದ ಮೂಲಕ ರಾಮ ರಾಜ್ಯದ ಕಲ್ಪನೆ ಸಾಕಾರವಾಗಬೇಕು. ಸಂಕಷ್ಟದಲ್ಲಿದ್ದವರಿಗೆ ಮನೆ ನಿರ್ಮಾಣ, ಆರೋಗ್ಯ ಇತ್ಯಾದಿಗಳಲ್ಲಿ ಸಹಕರಿಸಬೇಕು ಎಂದು ಆಶಿಸಿದರು.

ರಾಮ ಸೇವೆಗೆ ಮುಖ್ಯಪ್ರಾಣ ಪ್ರೇರಣೆ:

ಸಾನ್ನಿಧ್ಯ ವಹಿಸಿದ್ದ ಪರ‍್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉಡುಪಿ ಮತ್ತು ಕರ್ನಾಟಕಕ್ಕೂ ಅಯೋಧ್ಯೆಗೂ ನಿಕಟ ಸಂಪರ್ಕ ಇದೆ. ರಾಮ ಭಕ್ತ ಆಂಜನೇಯ ಕರ್ನಾಟಕ ಸಂಜಾತ. ಉಡುಪಿಯಲ್ಲಿರುವ ಮುಖ್ಯಪ್ರಾಣ ಅಯೋಧ್ಯೆಯಿಂದ ವಾದಿರಾಜರ ಮೂಲಕ ಬಂದಾತ. ಆತನೇ ಇಲ್ಲಿನ ಯತಿಗಳಿಗೆ ಪ್ರೇರಣೆ ನೀಡಿ ರಾಮ ಕಾರ‍್ಯದಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದಾನೆ. ಅಯೋಧ್ಯೆ ಮಂದಿರ ನಿರ್ಮಾಣದ ಹೋರಾಟ ಆರಂಭಗೊಂಡದ್ದು ಉಡುಪಿಯಿಂದ. ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರೇ ಪ್ರೇರಕ ಶಕ್ತಿ. ರಾಮಲಲ್ಲಾ ಮೂರ್ತಿ ಇದ್ದ ಜೈಲಿನ ಬೀಗ ಒಡೆಯುವ ಅವಕಾಶ ತಮಗೆ ಅಶೋಕ ಸಿಂಘಾಲ್ ಮೂಲಕ ಲಭಿಸಿತ್ತು ಎಂದು ಸ್ಮರಿಸಿದ ಪುತ್ತಿಗೆ ಶ್ರೀಗಳು, ತಮ್ಮ ದ್ವಿತೀಯ ಪರ‍್ಯಾಯ ಕಾಲದಲ್ಲಿ ರಾಮಲಲ್ಲಾ ಬಂಧನ ವಿಮೋಚನೆಯಾದರೆ, ನಾಲ್ಕನೆಯ ಪರ‍್ಯಾಯದಲ್ಲಿ ರಾಮ ಮಂದಿರ ನಿರ್ಮಾಣವಾಯಿತು. ಮಥುರಾ ವಿಮೋಚನೆಗೂ ಶ್ರೀಕೃಷ್ಣ ಪ್ರೇರಣೆ ನೀಡಲಿ ಎಂದು ಆಶಿಸಿದರು.

ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.

ಪುತ್ತಿಗೆ ಶ್ರೀಗಳ ಆಪ್ತ ಕಾರ‍್ಯದರ್ಶಿ ಪ್ರಸನ್ನಾಚಾರ‍್ಯ ಸ್ವಾಗತಿಸಿದರು. ವಾಸುದೇವ ಭಟ್ ಪೆರಂಪಳ್ಳಿ ನಿರೂಪಿಸಿ, ವಂದಿಸಿದರು. ಮಾಜಿ ಶಾಸಕ ರಘುಪತಿ ಭಟ್ ಮಂಡಲೋತ್ಸವದ ಅನುಭವ ಹಂಚಿಕೊಂಡರು. ಶಾಸಕ ಯಶಪಾಲ್ ಸುವರ್ಣ, ಶ್ರೀಮಠದ ಮುರಳೀಧರ ಆಚಾರ‍್ಯ, ಸಂತೋಷ ಶೆಟ್ಟಿ ತೆಂಕರಗುತ್ತು ಇದ್ದರು.

ಅಭಿನವ ಆಂಜನೇಯ ಬಿರುದು ಪ್ರದಾನ:

ರಾಮಾಯಣ ಕಾಲದಲ್ಲಿ ಉತ್ತರ ಭಾರತಕ್ಕೂ ದಕ್ಷಿಣ ಭಾರತಕ್ಕೂ ಆಂಜನೇಯ ಸಂಬಂಧ ಕಲ್ಪಿಸಿದರೆ, ಅಯೋಧ್ಯೆ ರಾಮ ಮಂದಿರದ ದಕ್ಷಿಣ ಭಾರತದ ಪ್ರತಿನಿಧಿಯಾಗಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಯೋಧ್ಯೆಗೂ ಉಡುಪಿಗೂ ಸ್ನೇಹಸೇತು ನಿರ್ಮಿಸಿದ್ದಾರೆ. ಆ ಮೂಲಕ ಉಡುಪಿಯ ಕೀರ್ತಿ ವರ್ಧಿಸಿದ್ದಾರೆ. ಆದ್ದರಿಂದ ಅವರಿಗೆ ‘ಅಭಿನವ ಆಂಜನೇಯ’ ಬಿರುದು ನೀಡಿ ಗೌರವಿಸುತ್ತಿರುವುದಾಗಿ ತಿಳಿಸಿದರು. ರಜತಪೀಠಪುರದಲ್ಲಿ ರಜತ ಫಲಕದ ಬಿನ್ನವತ್ತಳೆ ಸಮರ್ಪಿಸಲಾಯಿತು. ವಿದ್ವಾಂಸ ರಾಮನಾಥ ಆಚಾರ‍್ಯ ಸಂಮಾನಪತ್ರ ವಾಚಿಸಿದರು.

ಕಲಾರಂಗ, ಪುನರೂರು ಪ್ರೇರಣೆ:

ಮನೆ ಇಲ್ಲದವರಿಗೆ ಮನೆ ನಿರ್ಮಾಣದ ತಮ್ಮ ಆಶಯಕ್ಕೆ ಉಡುಪಿ ಯಕ್ಷಗಾನ ಕಲಾರಂಗ ಹಾಗೂ 100 ಮನೆ ನಿರ್ಮಿಸಿ ಬಡವರಿಗೆ ವಿತರಿಸಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರೇರಣೆ ಎಂದು ಪೇಜಾವರ ಶ್ರೀಗಳು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article