Udupi: ಈ ಬಾರಿಯದು ಸಂವಿಧಾನ ಉಳಿಸುವ ಚುನಾವಣೆ: ರಣದೀಪ್ ಸಿಂಗ್ ಸುರ್ಜೆವಾಲ
ಉಡುಪಿ: ಈ ಬಾರಿಯ ಚುನಾವಣೆ ಸಂವಿಧಾನ ಉಳಿಸುವ ಚುನಾವಣೆ. ಒಂದು ವೇಳೆ ಬಿಜೆಪಿ ಗೆದ್ದರೆ ಜನತೆಗೆ ಚೆಂಬೇ ಗತಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಲೇವಡಿ ಮಾಡಿದರು.
ಸೋಮವಾರ ಚೆಂಬು ಹಿಡಿದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಸಂವಿಧಾನದಲ್ಲಿ ಪರಿಶಿಷ್ಟ ಜಾತಿ- ಪಂಗಡಗಳಿಗೆ ನೀಡಲಾದ ಮೀಸಲಾತಿ ರದ್ದಾಗುತ್ತದೆ. ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತದೆ. ಆದ್ದರಿಂದ ಇದು ಸಂವಿದಾನವನ್ನು ಉಳಿಸುವ ಚುನಾವಣೆಯಾಗಿದೆ ಎಂದರು.
ದೇಶದಲ್ಲಿ ಸಾಮಾಜಿಕ ನ್ಯಾಯದಡಿ 5 ಗ್ಯಾರಂಟಿಗಳನ್ನು ಘೋಷಿಸಿ ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಪ್ರಥಮ ರಾಜ್ಯ ಕರ್ನಾಟಕ. ಆದರೆ, ಆರಂಭದಲ್ಲಿ ಕಾಂಗ್ರೆಸ್‌ನ ಈ ಗ್ಯಾರಂಟಿಗಳು ಅನುಷ್ಠಾನವೇ ಆಗುವುದಿಲ್ಲ ಎಂದು ಟೀಕಿಸಿದ್ದ ಪ್ರಧಾನಿ ಮೋದಿ ಅವರೇ, ಈಗ ಅವುಗಳನ್ನು ಕದ್ದು ಮೋದಿ ಗ್ಯಾರಂಟಿ ಎಂದು ಘೋಷಿಸಿದ್ದಾರೆ.
ಗೃಹಲಕ್ಷ್ಮೀ ಗ್ಯಾರಂಟಿಯಿಂದ 1.25 ಲಕ್ಷ ಮಹಿಳೆಯರು, ಗೃಹಜ್ಯೋತಿ ಗ್ಯಾರಂಟಿಯಿಂದ 1.80 ಕೋಟಿ ಮನೆಗಳು, ಶಕ್ತಿ ಗ್ಯಾರಂಟಿಯಿಂದ ದಿನಕ್ಕೆ 35 ಲಕ್ಷ ಮಹಿಳೆಯರು, ಅನ್ನ ಭಾಗ್ಯ ಗ್ಯಾರಂಟಿಯಿಂದ ೪.೪೯ ಕೋಟಿ ಕುಟುಂಬಗಳು ಮತ್ತು ಯುವನಿಧಿ ಗ್ಯಾರಂಟಿಯಿಂದ 1.50 ಲಕ್ಷ ಯುವಕರು ನೇರ ಲಾಭ ಪಡೆದಿದ್ದಾರೆ. ಈಗ ಎಐಸಿಸಿ ಮತ್ತೆ 5 ಗ್ಯಾರಂಟಿಗಳನ್ನು ಘೋಷಿಸಿದೆ ಎಂದರು.
ಆದರೆ, ರಾಜ್ಯದ ಜನತೆಗೆ ಕೇಂದ್ರ ಸರ್ಕಾರ ಚೊಂಬು ಗ್ಯಾರಂಟಿ ನೀಡಿದೆ ಎಂದು ಟೀಕಿಸಿದ ಸುರ್ಜೆವಾಲ, ಅತೀ ಹೆಚ್ಚು ತೆರಿಗೆ ನೀಡುವ ಕರ್ನಾಟಕಕ್ಕೆ ಶೇ 13ರಷ್ಟು ಅನುದಾನ ನೀಡಿ ಚೊಂಬು ನೀಡಿದ್ದಾರೆ. ಭದ್ರ ಅಣೆಕಟ್ಟು ಯೋಜನೆಗೆ ಕೇಂದ್ರ ಸರ್ಕಾರ 5,300 ಕೋಟಿ ರೂ. ಘೋಷಿಸಿ ನಂತರ ಬಿಡುಗಡೆ ಮಾಡದೇ ಚೊಂಬು ನೀಡಿದ್ದಾರೆ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ.. ನೀಡುವುದಾಗಿ ಹೇಳಿ ಚೊಂಬು ನೀಡಿದ್ದಾರೆ. 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿ ಚೊಂಬು ನೀಡಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಹೇಳಿ ಚೊಂಬು ನೀಡಿದ್ದಾರೆ ಎಂದು ಪುನರುಚ್ಚರಿಸಿದರು.
ಕಾಂಗ್ರೆಸ್ ಪ್ಯಾನ್ ಇಂಡಿಯಾ ಪಕ್ಷವಾಗಿ ಉಳಿದಿಲ್ಲ. ಈ ಬಾರಿ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿಲ್ಲ ಎಂಬುದನ್ನು ಅಲ್ಲಗಳೆದ ಸುರ್ಜೆವಾಲ, ಈಗಾಗಲೇ ೩೩೦ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನೂ ಕೆಲವು ಕ್ಷೇತ್ರಗಳಿಗೆ ಘೋಷಣೆಯಾಗಿದೆ, ಮುಂದೆ ಮತ್ತೂ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆಯಾಗುತ್ತದೆ ಎಂದರು.
ರಾಜ್ಯದಲ್ಲೀಗ ಮತದಾರರ ಎದುರು ಎರಡು ಮಾದರಿಯ ಆಯ್ಕೆಗಳಿವೆ. ಒಂದು ಕಾಂಗ್ರೆಸ್ ಸರ್ಕಾರದ ನುಡಿದಂತೆ ನಡೆಯುವ ಗ್ಯಾರಂಟಿ ಮಾದರಿ, ಇನ್ನೊಂದು ಬಿಜೆಪಿಯ ಚೊಂಬು ಗ್ಯಾರಂಟಿಯ ಮಾದರಿ ಎಂದು ಎಐಸಿಸಿ ಪ್ರ.ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ವ್ಯಂಗ್ಯವಾಡಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಪಕ್ಷ ಪ್ರಮುಖರಾದ ಸಲೀಂ ಅಹ್ಮದ್, ವಿನಯ್ ಕುಮಾರ್ ಸೊರಕೆ, ಎಮ್. ಎ. ಗಪೂರ್, ಸೂರಜ್ ಹೆಗ್ಡೆ, ವಿಜಯ ಮುಳಗುಂದ್, ಅಶೋಕ್ ಕುಮಾರ್ ಕೊಡವೂರು, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಪ್ರಸಾದ್‌ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಭಾಸ್ಕರ ರಾವ್ ಕಿದಿಯೂರು ಇದ್ದರು.