Ujire: ಸಾಹಿತ್ಯಕ ಕುತೂಹಲ ಉತ್ತಮ ಮಾತುಗಾರಿಕೆಗೆ ಸಹಕಾರಿ: ಡಾ.ಬಿ.ಎ. ಕುಮಾರ ಹೆಗ್ಡೆ
ಉಜಿರೆ: ಸಾಹಿತ್ಯಕ ಕುತೂಹಲ ಉತ್ತಮ ಮಾತುಗಾರಿಕೆಗೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಓದಿನ ಮೂಲಕ ತಮ್ಮ ಭಾಷಣ ಕಲೆಯನ್ನು ಮೊನಚುಗೊಳಿಸಿಕೊಳ್ಳಬೇಕು ಎಂದು ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ. ಕುಮಾರ ಹೆಗ್ಡೆ ಆಶಿಸಿದರು.
ಉಜಿರೆಯ ಎಸ್‌ಡಿಎಂ ಕಾಲೇಜಿನ ಸಮ್ಯಕ್ ದರ್ಶನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ೪೦ನೇ ವರ್ಷದ ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದ ಡಿ. ರತ್ನವರ್ಮ ಹೆಗ್ಗಡೆ ಸ್ಮಾರಕ ’ಅಂತರ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆ’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಆಧುನಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ದೊರಕುವ ಓದಿನ ಮೂಲಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಬದಲಾಗಿ ಹೆಚ್ಚಿನ ಪುಸ್ತಕಗಳನ್ನು ಓದಬೇಕು. ಓದಿನ ತುಡಿತ ಮನುಷ್ಯನನ್ನು ಮಹತ್ತರ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಶ್ರೇಷ್ಠ ವಾಗ್ಮಿಗಳ ಕೃತಿಗಳು ವಿದ್ಯಾರ್ಥಿಗಳ ಭಾಷಣ ಕಲೆಯಲ್ಲಿ ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ನಿರ್ಣಾಯಕರಾದ ಡಾ. ಡಿ. ಕೃಷ್ಣಮೂರ್ತಿ ಮಾತನಾಡಿದರು. ಆಲೋಚನಾ ಶಕ್ತಿ ಭಾಷಣ ಕಲೆಗಳಿಗೆ ಸಹಾಯಕವಾಗಿದೆ. ವಿಷಯಗಳ ಅವಲೋಕನ ವಿಸ್ತಾರ ಮಂಡನೆಗೆ ಉಪಯುಕ್ತವಾಗಿದೆ.ಭಾಷಣ ಕಲೆಯು ವಿಚಾರಧಾರೆಯ ಸಮರ ಇಲ್ಲಿ ಭಾಷಣಗಾರ ತನ್ನ ಜ್ಞಾನ ಹಾಗೂ ಹಾವಭಾವಗಳಿಂದ ಕೇಳುಗರನ್ನು ಆಕರ್ಷಿಸಬೇಕು ಎಂದರು.
ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ಚೇತನಾ ಪೈ ಹಾಗೂ ಅನುಷಾ ಚರ್ಚಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನಿತರಾಗಿ ಹೊರಹೊಮ್ಮಿದರು. ದ್ವಿತೀಯ ಸ್ಥಾನವನ್ನು ಕಾರ್ಕಳದ ಭುವನೇಂದ್ರ ಕಾಲೇಜಿನ ವಿಧ್ಯಾರ್ಥಿಗಳು ಪಡೆದುಕೊಂಡರು. ಸುರತ್ಕಲ್‌ನ ಗೋವಿಂದದಾಸ ಕಾಲೇಜಿನ ಹಿತ ಉಮೇಶ್ ಉತ್ತಮ ಚರ್ಚಾಪಟು ಪ್ರಶಸ್ತಿ ಗಳಿಸಿದರು. ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದ ಕಾಲೇಜುಗಳ ೨೦ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು.
ಸಂಯೋಜಕ ಡಾ. ಸುಧೀರ್ ಕೆ.ವಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನಾಗಣ್ಣ ಡಿ.ಎ. ಸ್ವಾಗತಿಸಿ, ಪ್ರಾಧ್ಯಾಪಕ ಮಹೇಶ್ ಆರ್. ವಂದಿಸಿದರು.