
Mangalore: ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ವತಿಯಿಂದ 2024-25ನೇ ಶೈಕ್ಷಣಿಕ ಸಾಲಿಗೆ 80 ಲಕ್ಷ ರೂ. ವಿದ್ಯಾರ್ಥಿ ವೇತನ ಘೋಷಣೆ
ಮಂಗಳೂರು: ಶಕ್ತಿನಗರದ ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಆಡಳಿತಗೊಳಪಟ್ಟ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪಪೂ ಕಾಲೇಜಿನಲ್ಲ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆಯುವ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸುಮಾರು 80 ಲಕ್ಷ ರೂ.ನ ವಿದ್ಯಾರ್ಥಿ ವೇತನವನ್ನು ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ ನಾಕ್ ಘೋಷಣೆ ಮಾಡಿರುತ್ತಾರೆ. ಇದರಲ್ಲಿ 10 ಲಕ್ಷ ರೂ. ವಿದ್ಯಾರ್ಥಿ ವೇತನವನ್ನು ಮುಂಬಯಿಯ ಉದ್ಯಮಿ ಡಾ. ಶಶಿಕಿರಣ ಶೆಟ್ಟಿ ಅವರು ನೀಡುತ್ತಿದ್ದಾರೆ.
ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 5 ರಿಂದ 10ನೇ ತರಗತಿಯವರೆಗಿನ 6 ವಿದ್ಯಾರ್ಥಿಗಳನ್ನು ವಿದ್ಯಾರ್ಥಿವೇತನಕ್ಕೆ ಆಯ್ಕೆ ಮಾಡಲಾಗುದ್ದು, ಇವರಿಗೆ ಡಾ. ಶಶಿಕಿರಣ ಶೆಟ್ಟಿಯವರಿಂದ 50,000 ರೂ.ನಂತೆ 8 ಲಕ್ಷ ರೂ. ಹಾಗೂ ಉಳಿದಿರುವ ಇವರ ಶುಲ್ಕದ ಹಣವನ್ನು ಡಾ. ಕೆ.ಸಿ ನಾಕ್ ವಿದ್ಯಾರ್ಥಿ ವೇತನದ ಮೂಲಕ ಭರಿಸುತ್ತಾರೆ.
ಶಕ್ತಿ ಪಪೂ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಉದ್ದೇಶಿಸಿರುವ ವಿಜ್ಞಾನ ವಿಭಾಗದ ಬಡ ಪ್ರತಿಭಾನ್ವಿತ 7 ವಿದ್ಯಾರ್ಥಿಗಳಿಗೆ ತಲಾ 1 ಲಕ್ಷ ರೂ.ಗಳ ಹಾಗೆ ಒಟ್ಟು 7 ಲಕ್ಷ ವಿದ್ಯಾರ್ಥಿ ವೇತನವನ್ನು ಡಾ. ಶಶಿಕಿರಣ ಶೆಟ್ಟಿ ಹಾಗೂ ಶಕ್ತಿ ವಿದ್ಯಾ ಸಂಸ್ಥೆಯಿಂದ ಇವರ ಉಳಿದ ಶುಲ್ಕದ ಹಣವನ್ನು ವಿದ್ಯಾರ್ಥಿ ವೇತನದ ಮೂಲಕ ಭರಿಸಲಾಗುತ್ತದೆ. ಈ ಎರಡು ವಿದ್ಯಾರ್ಥಿ ವೇತನವನ್ನು ಪಡೆಯುವ ವಿದ್ಯಾರ್ಥಿಗಳ ಪೋಷಕರು 3 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ವರಮಾನವನ್ನು ಹೊಂದಿದ್ದರೆ ಇಂತಹ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಇವರು ಸಂಸ್ಥೆಯು ನಿಗದಿ ಪಡಿಸಿರುವ ಮಾನದಂಡಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಶಕ್ತಿ ಪಪೂ ಕಾಲೇಜಿನ ವಿಜ್ಞಾನ ವಿಭಾಗ ಹಾಗೂ ವಾಣಿಜ್ಯ ವಿಭಾಗದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 99ಶೇ. ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದರೆ ಪ್ರಥಮ ಪಿಯುಸಿಗೆ ಸಂಪೂರ್ಣ ಉಚಿತ ಶಿಕ್ಷಣವನ್ನು ಕೊಡಲು ಸಂಸ್ಥೆಯು ತೀರ್ಮಾನಿಸಿರುತ್ತದೆ. ಈ ಅವಕಾಶವನ್ನು ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬಹುದಾಗಿದೆ.
ಕರ್ನಾಟಕ ಪ್ರೌಢ ಶಿಕ್ಷಣ ಬೋರ್ಡ್, ಐಸಿಎಸ್‌ಇ ಮತ್ತು ಸಿಬಿಎಸ್‌ಇ ನಡೆಸುವ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ 95ಶೇ. ಕ್ಕಿಂತ ಹೆಚ್ಚು ಅಂಕ ಪಡೆಯುವ 50 ವಿದ್ಯಾರ್ಥಿಗಳು ಶಕ್ತಿ ಪಪೂ ಕಾಲೇಜಿನಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಪ್ರವೇಶ ಪಡೆದರೆ ಅವರ ಭೋದನಾ ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿಯನ್ನು ನೀಡಲಾಗುತ್ತದೆ. ಈ ಎಲ್ಲಾ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯಬೇಕೆಂದು ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಶಕ್ತಿನಗರದಲ್ಲಿರುವ ಶಕ್ತಿ ಸಂಸ್ಥೆಯ ಕಚೇರಿ ಅಥವಾ ಮೊಬೈಲ್ ಸಂಖ್ಯೆ 9686000046ನ್ನು ಸಂಪರ್ಕಿಸಬಹುದಾಗಿದೆ.