Mangalore: ಕಾಂಗ್ರೆಸ್‌ನ ಹಿಂದೂ ವಿರೋಧಿ ಮನಸ್ಥಿತಿ ಮತ್ತೊಮ್ಮೆ ಜಗತ್‌ಜಾಹೀರಾಗಿದೆ: ವೇದವ್ಯಾಸ ಕಾಮತ್

Mangalore: ಕಾಂಗ್ರೆಸ್‌ನ ಹಿಂದೂ ವಿರೋಧಿ ಮನಸ್ಥಿತಿ ಮತ್ತೊಮ್ಮೆ ಜಗತ್‌ಜಾಹೀರಾಗಿದೆ: ವೇದವ್ಯಾಸ ಕಾಮತ್


ಮಂಗಳೂರು: ರಾಮಮಂದಿರದ ವಿಷಯದಲ್ಲಿ ದೇಶದ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆಯಾದ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನೇ ಬದಲಿಸಲು ರಾಹುಲ್ ಗಾಂಧಿ ಚಿಂತನೆ ನಡೆಸಿದ್ದರು ಎಂದು ಮಾಜಿ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಹೇಳಿಕೆ ನೀಡಿದ್ದು, ಕಾಂಗ್ರೆಸ್ ಅದೆಷ್ಟು ಹಿಂದೂ ವಿರೋಧಿ ಮನಸ್ಥಿತಿಯನ್ನು ಹೊಂದಿದೆ ಎನ್ನುವುದು ಮತ್ತೊಮ್ಮೆ ಜಗತ್‌ಜಾಹೀರಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಅಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ಗೈರಾಗಿ ರಾಮಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧವಿದೆ ಎಂಬುದನ್ನು ಕಾಂಗ್ರೆಸ್ ನೇರವಾಗಿ ಸೂಚಿಸಿತ್ತು. ಇದೀಗ ರಾಹುಲ್ ಗಾಂಧಿ ಅಮೆರಿಕದ ತಮ್ಮ ಹಿತೈಷಿಗಳ ಸಲಹೆ ಹಾಗೂ ಆಪ್ತರೊಂದಿಗೆ ನಡೆಸಿದ ಚರ್ಚೆಯ ನಂತರ ಮುಂದಿನ ದಿನಗಳಲ್ಲಿ ತಾವು ಅಧಿಕಾರಕ್ಕೆ ಬಂದಲ್ಲಿ, ಶಾಬಾನೋ ಪ್ರಕರಣದಲ್ಲಿ ರಾಜೀವ್ ಗಾಂಧಿ ಸರ್ಕಾರ ಸೂಪರ್ ಪವರ್ ಆಯೋಗವನ್ನು ರಚಿಸಿ ಸುಪ್ರೀಂ ಕೋರ್ಟ್ ತೀರ್ಪನ್ನೇ ಬದಲಿಸಿದ್ದ ಮಾದರಿಯಲ್ಲೇ ರಾಮಮಂದಿರ ತೀರ್ಪನ್ನು ಬದಲಿಸುವ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದರು ಎಂದು ಕಾಂಗ್ರೆಸ್‌ನಲ್ಲಿ ಮೂರು ದಶಕಗಳಿಗೂ ಅಧಿಕ ಕಾಲ ಇದ್ದ ಆಚಾರ್ಯರು ತಿಳಿಸಿರುವುದು ಶತ ಕೋಟಿ ರಾಮಭಕ್ತರ ಪಾಲಿಗೆ ಆಘಾತಕಾರಿ ಸಂಗತಿಯಾಗಿದೆ. 

ಇದೇ ವೇಳೆ ಕಾಂಗ್ರೆಸ್ ನಾಯಕಿ ರಾಧಿಕಾ ಖೇರಾರವರು ಅಯೋಧ್ಯೆಗೆ ಭೇಟಿ ನೀಡಿದ ಕಾರಣಕ್ಕೆ ಪಕ್ಷದೊಳಗೆ ತೀವ್ರ ಟೀಕೆಗೆ ಒಳಗಾಗಿ ಬೇಸರದಿಂದ ಪಕ್ಷ ತೊರೆದಿದ್ದರು. ಮೋದಿಯವರನ್ನು ವಿರೋಧಿಸುವ ಭರದಲ್ಲಿ ಶತಕೋಟಿ ಭಾರತೀಯರ ಆರಾಧ್ಯ ದೈವ ಶ್ರೀರಾಮನನ್ನು ವಿರೋಧಿಸುವ ಮಟ್ಟಕ್ಕೆ ತಲುಪಿರುವುದು ಕಾಂಗ್ರೆಸ್ಸಿನ ಅಂತಿಮ ದಿನಗಳು ಸಮೀಪಿಸುತ್ತಿರುವುದರ ಸಂಕೇತವೆಂದು ಶಾಸಕರು ಹೇಳಿದರು.

ಈ ದೇಶದ ಅಸ್ಮಿತೆಯಾದ ಸನಾತನ ಹಿಂದೂ ಸಂಸ್ಕೃತಿ ತನ್ನ ಗತವೈಭವದತ್ತ ಮರಳಿದೆ. ಹಿಂದೂ ಸಮಾಜ ಹಿಂದೆಂದಿಗಿಂತಲೂ ಜಾಗೃತವಾಗಿದೆ. ಹೀಗಿರುವಾಗ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೇ ಕನಸಿನ ಮಾತು. ಇನ್ನು ರಾಮ ಮಂದಿರವನ್ನು ಮುಟ್ಟುವುದು ಬಿಡಿ, ಅದರತ್ತ ಕೆಟ್ಟ ಉದ್ದೇಶದಿಂದ ಕಣ್ಣು ಹಾಯಿಸಲು ಸಾಧ್ಯವಿಲ್ಲ ಎಂದು ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article