Mangalore: ಸ್ಟೇಟ್ಬ್ಯಾಂಕ್ನಿಂದ ಬಜಾಲ್, ಜಲ್ಲಿಗುಡ್ಡ, ಫೈಸಲ್ ನಗರಕ್ಕೆ ಸಂಚರಿಸುವ ಕೆಎಸ್ಆರ್ಟಿಸಿ ನರ್ಮ್ ಬಸ್ ಪುನರಾರಂಭಿಸುವಂತೆ ಮನವಿ
ಮಂಗಳೂರು: ಮಂಗಳೂರು ನಗರದ ಸ್ಟೇಟ್ಬ್ಯಾಂಕ್ನಿಂದ ಬಜಾಲ್ ಸ್ಟೇಟ್ಬ್ಯಾಂಕ್ವರೆಗೆ ಮತ್ತು ಜಲ್ಲಿಗುಡ್ಡ, ಫೈಸಲ್ ನಗರವರೆಗೆ ಸಂಚರಿಸುತ್ತಿದ್ದ ಎರಡು ಕೆ.ಎಸ್.ಆರ್.ಟಿ.ಸಿ. ನರ್ಮ್ ಬಸ್ಸು ಕಳೆದ ಕೊರೊನಾ ಕಾಲ ಪ್ರಾರಂಭದ ಲಾಕ್ಡೌನ್ ವೇಳೆ ತನ್ನ ಸೇವೆಯನ್ನು ನಿಲ್ಲಿಸಿದ ನಂತರ ಈವರೆಗೂ ಪುನಃರಾರಂಭ ಗೊಂಡಿರುವುದಿಲ್ಲ. ಇದರಿಂದಾಗಿ ಈ ಭಾಗದ ಜನಸಾಮಾನ್ಯರು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಮಾತ್ರವಲ್ಲ ಈ ಭಾಗದ ಬಡ ಮಹಿಳೆಯರನ್ನು ಸರಕಾರದ ಶಕ್ತಿ ಯೋಜನೆಯಿಂದ ವಂಚಿತರನ್ನಾಗಿಸಿದೆ. ಸಾರಿಗೆ ಇಲಾಖೆ ಈ ಕೂಡಲೇ ನರ್ಮ್ ಬಸ್ಸನ್ನು ಪುನರಾರಂಭಿಸಬೇಕೆಂದು ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಘಟಕ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಬಹುತೇಕ ಬಡವರೇ ವಾಸಿಸುವ ಬಜಾಲ್ ಸುತ್ತಮುತ್ತಲ ಭಾಗದ ಜನ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹಾಗೂ ಮತ್ತಿತರ ಕೆಲಸಗಳಿಗೆ ತೆರಳಲು ಬಹುತೇಕ ಸರಕಾರಿ ನರ್ಮ್ ಬಸ್ಸನ್ನೇ ಅವಲಂಭಿಸುತ್ತಿದ್ದಾರೆ. ಈ ಮಧ್ಯೆ ಖಾಸಗಿ ಬಸ್ಸು ಪ್ರಯಾಣ ದರವು ವಿಪರೀತವಾಗಿ ಏರಿಕೆಯಾಗಿದೆ ಮತ್ತದರಲ್ಲಿ ಸಂಚರಿಸದಂತಹ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಪರೀತ ದರ ಏರಿಕೆಯ ಹೊರೆಯಿಂದ ತಪ್ಪಿಸಲು ಸರಕಾರಿ ಬಸ್ಸು ಬಹಳ ಉಪಯುಕ್ತವಾಗುತ್ತಿದ್ದು. ಆದರೆ ಸರಕಾರಿ ಬಸ್ಸು ಕಳೆದ ಒಂದು ವರುಷಗಳಿಂದ ಈ ಭಾಗದ ಸೇವೆಯನ್ನು ನೀಡದೇ ಇರೋದರಿಂದ ಸಮಯಕ್ಕೆ ಸರಿಯಾಗಿ ಅಗತ್ಯ ಸ್ಥಳಗಳಿಗೆ ಸಂಚರಿಸಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಈ ಭಾಗಕ್ಕೆ ಸರಕಾರಿ ನರ್ಮ್ ಬಸ್ಸು ಬರಬೇಕೆಂದು ಈ ಭಾಗದ ಜನಸಾಮಾನ್ಯರು, ಸಂಘ ಸಂಸ್ಥೆಗಳು, ಪ್ರಗತಿಪರ ಸಂಘಟನೆಗಳ ಹೋರಾಟದ ಭಾಗವಾಗಿಯೇ ಲಭಿಸಲು ಸಾಧ್ಯವಾಗಿದ್ದು ಸರಕಾರಿ ಬಸ್ಸು ಬೇಕೆಂಬುದು ಈ ಊರಿನ ಜನರ ಮೂಲ ಬೇಡಿಕೆಯಲ್ಲೊಂದಾಗಿದೆ. ಸದ್ರಿ ರಾಜ್ಯ ಸರಕಾರ ಮಹಿಳೆಯರಿಗೆ ಕಲ್ಪಿಸಿದ ಉಚಿತ ಪ್ರಯಾಣದಿಂದ ಈ ಭಾಗದ ದುಡಿಯುವ ಮಹಿಳೆಯರು ವಂಚಿತರಾಗುವಂತಾಗಿದೆ. ಆದ್ದರಿಂದ ಈ ಭಾಗದ ಸರಕಾರಿ ನರ್ಮ್ ಬಸ್ಸು ಸೇವೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು.
ಈ ಎಲ್ಲಾ ಹಿನ್ನಲೆಯಲ್ಲಿ ಬಜಾಲ್ ಸ್ಟೇಟ್ಬ್ಯಾಂಕ್ ಹಾಗೂ ಜಲ್ಲಿಗುಡ್ಡ, ಫೈಸಲ್ ನಗರದಿಂದ ಮಂಗಳೂರು ನಗರ ಸ್ಟೇಟ್ಬ್ಯಾಂಕ್ ವರೆಗೆ ಸಂಚರಿಸುವ ಸರಕಾರಿ ನರ್ಮ್ ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ಪುನಃರಾರಂಭಿಸಬೇಕೆಂದು ಒತ್ತಾಯಿಸುತ್ತದೆ ಇಲ್ಲದಿದ್ದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕೆ.ಎಸ್.ಆರ್.ಟಿ.ಸಿ ಸಾರಿಗೆ ಸಂಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದೆ.
ಮನವಿ ಪಡೆದು ಮಾತನಾಡಿದ ಹಿರಿಯ ವಿಭಾಗೀಯ ನಿಯಂತ್ರಾಧಿಕಾರಿ ರಾಜೇಶ್ ಶೆಟ್ಟಿ ಅವರು ಬಹಳಷ್ಟು ಬೇಡಿಕೆ ಇರುವ ಹಿನ್ನಲೆಯಲ್ಲಿ ಬಸ್ ರೆಡಿ ಇದೆ ಆದರೆ ಮಂಗಳೂರು ವಿಭಾಗಕ್ಕೆ ಸುಮಾರು 200 ಸಿಬ್ಬಂದಿಗಳ ಕೊರತೆ ಇದೆ. ಇದು ಸರಕಾರದ ಮಟ್ಟದಲ್ಲಿ ನೇಮಕಾತಿಗಳಾದರೆ ಈ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸಲು ಸಾಧ್ಯವಿದೆ. ಸ್ಟೇಟ್ಬ್ಯಾಂಕ್ನಿಂದ ಪೈಸಲ್ ನಗರಕ್ಕೆ ಈಗಾಗಲೇ ಬಸ್ ಬಂದು ನಿಂತಿದೆ ಕೆಲವೇ ದಿನಗಳಲ್ಲಿ ಓಡಾಟ ನಡೆಸಲಿದೆ ಎಂದು ತಿಳಿಸಿದರು.
ಡಿವೈಎಫ್ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್ಐ ನಗರ ಅಧ್ಯಕ್ಷ ಜಗದೀಶ್ ಬಜಾಲ್, ಬಜಾಲ್ ಘಟಕದ ಕಾರ್ಯದರ್ಶಿ ಆನಂದ ಎ. ನೆಲ್ಮಾರ್, ದೀಪಕ್ ಬಜಾಲ್, ಅಶೋಕ್ ಎನೆಲ್ಮಾರ್, ಧಿರಾಜ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.