
Mangalore: ಪ್ರಜ್ವಲ್ ರೇವಣ್ಣ ಗೆದ್ದರೆ ಗುಂಡು ಹಾರಿಸಬೇಕು: ಮಹಿಳಾ ಕಾಂಗ್ರೆಸ್
ಮಂಗಳೂರು: ಲೈಂಗಿಕ ಹಗರಣ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಒತ್ತಾಯಿಸಿ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೋ ಮಾತನಾಡಿ, ಪ್ರಜ್ವಲ್ ರೇವಣ್ಣ ಇಷ್ಟು ಸಣ್ಣ ಪ್ರಾಯದಲ್ಲಿ ಇಷ್ಟೆಲ್ಲಾ ಹೆಣ್ಮಕ್ಕಳನ್ನು ದುರುಪಯೋಗ ಮಾಡಿಕೊಂಡಿದ್ದಾನೆ. ಆ ಕುಟುಂಬದ ಬಗ್ಗೆ ಹೇಸಿಗೆ ಹುಟ್ಟುತ್ತದೆ. ತೆನೆಹೊತ್ತ ಮಹಿಳೆಯನ್ನು ಪಕ್ಷದ ಚಿಹ್ನೆ ಮಾಡಿಕೊಂಡು ನೂರಾರು ಮಹಿಳೆಯರ ಮಾನ ಕಳೆದಿದ್ದಾನೆ. ಪ್ರಜ್ವಲ್ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬಂದರೆ ಆತನಿಗೆ ಗುಂಡು ಹಾರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾವಿರಾರು ಹೆಣ್ಮಕ್ಕಳ ಬದುಕನ್ನು ಬೀದಿಗೆ ತಂದಿದ್ದಾನೆ. ವಿಡಿಯೋ ಮಾಡಿ, ಬದುಕನ್ನೇ ಹಾಳು ಮಾಡಿದ್ದಾನೆ. ಆ ಮಹಿಳೆಯರು ಸಮಾಜದಲ್ಲಿ ಮುಖ ತೋರಿಸದ ಸ್ಥಿತಿಯಾಗಿದೆ. ಪ್ರಜ್ವಲ್ ಮನುಷ್ಯನಲ್ಲ, ಮೃಗ. ಆತನಿಗೆ ಕಠಿಣ ಶಿಕ್ಷೆಯಾಗಬೇಕು. ಆದರೆ ಸಣ್ಣ ಸಣ್ಣ ವಿಚಾರಕ್ಕೆ ಬೀದಿಗೆ ಬರುವ, ಮಹಿಳೆಯರ ಬಗ್ಗೆ ಧ್ವನಿಯೆತ್ತುವ ಬಿಜೆಪಿ ನಾಯಕರು ಎಲ್ಲಿದ್ದಾರೆ. ಶೋಭಕ್ಕ, ನಿರಾಣಿ, ಅಶೋಕ್ ಇವರೆಲ್ಲ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಶಾಹುಲ್ ಹಮೀದ್, ತನ್ವೀರ್ ಶಾ, ರೂಪಾ ಚೇತನ್, ಚಂದ್ರಕಲಾ ಜೋಗಿ, ಶಶಿಕಲಾ ಪದ್ಮನಾಭನ್, ಶಾಂತಲಾ ಗಟ್ಟಿ, ಗೀತಾ ಅತ್ತಾವರ, ಚಂದ್ರಕಲಾ ಡಿ. ರಾವ್, ನಮಿತಾ ಡಿ. ರಾವ್, ವಂದನ ಭಂಡಾರಿ, ಶಾರಿಕ ಪೂಜಾರಿ, ಪ್ರಮಿಳಾ, ಅನಿತ, ವಿಲ್ಮ, ಡಿಂಪಲ್, ಮೇರಿ, ನ್ಯಾನ್ಸಿ, ಲವಿನಾ, ಅರ್ಚನಾ ಮೊದಲಾದವರಿದ್ದರು.