
Mangalore: ಹರೀಶ್ ಆಚಾರ್ಯಗೆ ಅತಿಥಿ ಉಪನ್ಯಾಸಕರ ಬೆಂಬಲ: ಮನಮೋಹನ್ ಬಲ್ಲಡ್ಕ
ಮಂಗಳೂರು: ಶಿಕ್ಷಕ ಸಮುದಾಯದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿದ್ದು, ಅವುಗಳ ಸೂಕ್ತ ಪರಿಹಾರಕ್ಕಾಗಿ ‘ಶಿಕ್ಷಕರ ಪ್ರತ್ಯೇಕ ಸೇವಾ ಅಧಿನಿಯಮ ಕಾಯ್ದೆ’ಯ ಜಾರಿಯ ಬಗ್ಗೆ ನೈರುತ್ಯ ಶಿಕ್ಷಕ ಕ್ಷೇತ್ರದ ಅಭ್ಯರ್ಥಿ ಡಾ. ಎಸ್.ಆರ್. ಹರೀಶ್ ಆಚಾರ್ಯ ಅವರು ಚಿಂತನೆ ಹೊಂದಿದ್ದಾರೆ. ಸಂಘದ ಗೌರವಾಧ್ಯಕ್ಷರೂ ಆಗಿರುವ ಅವರ ಚಿಂತನೆಯನ್ನ ಅತಿಥಿ ಉಪನ್ಯಾಸಕರ ಸಂಘ ಬೆಂಬಲಿಸುತ್ತದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮನಮೋಹನ್ ಬಲ್ಲಡ್ಕ ತಿಳಿಸಿದ್ದಾರೆ.
ಇಂದು ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರೀಶ್ ಆಚಾರ್ಯ ಅವರ ಚಿಂತನೆ ವಿನೂತನವಾದುದು. ಶಿಕ್ಷಕ ಕ್ಷೇತ್ರದ ಎಲ್ಲ ಸಮಸ್ಯೆಗಳಿಗೆ ಈ ಕಾಯ್ದೆ ರಾಮಬಾಣವಾಗಲಿದೆ. ಅತಿಥಿ ಉಪನ್ಯಾಸಕರ ಸಮಸ್ಯೆ ಪರಿಹಾರಕ್ಕೆ ಈ ಕಾಯ್ದೆಯಿಂದ ಹೆಚ್ಚಿನ ಉತ್ತರ ದೊರೆಯಲಿದೆ. ಈ ನಿಟ್ಟಿನಲ್ಲಿ ಶಿಕ್ಷಕರು, ಉಪನ್ಯಾಸಕರು ಅವರನ್ನು ಬೆಂಬಲಿಸಲು ಉದ್ದೇಶಿಸಿದ್ದೇವೆ ಎಂದರು.
ಖಾಸಗಿ ಶಾಲಾ ಕಾಲೇಜು ಶಿಕ್ಷಕರಿಗೆ ಆ ಹುದ್ದೆಯ ಮೂಲ ವೇತನವನ್ನು ಕನಿಷ್ಠ ವೇತನವನ್ನಾಗಿ ಪರಿಗಣಿಸಬೇಕು. ಗುತ್ತಿಗೆ ಅವಧಿ ಕನಿಷ್ಠ 36 ತಿಂಗಳು ಆಗಿರಬೇಕು. ಮಹಿಳಾ ಶಿಕ್ಷಕರಿಗೆ ಹೆಚ್ಚುವರಿಗೆ 5 ಸಾಂದರ್ಭಿಕ ರಜೆ ನೀಡಬೇಕು, ಎಲ್ಲ ಗುತ್ತಿಗೆ ಆಧಾರಿತ ಶಿಕ್ಷಕರಿಗೆ ಭವಿಷ್ಯನಿಧಿ ಮತ್ತು ಇಎಸ್‌ಐ ಸೌಲಭ್ಯ ಎಂಬ ಹಲವಾರು ಸಂಗತಿಗಳನ್ನು ಪ್ರಸ್ತಾವಿತ ಮಸೂದೆಯಲ್ಲಿ ಸೇರಿಸಿಕೊಳ್ಳುವ ಅವರ ನಿಲುವಿನಲ್ಲಿ ಶಿಕ್ಷಕ ಸಮುದಾಯದ ಸಂಪೂರ್ಣ ಹಿತದ ಆಶಯ ಅಡಗಿದೆ. ಪ್ರಸ್ತಾವಿತ ಕಾಯ್ದೆಯ ವಿಚಾರವಾಗಿ ಖಾಸಗಿ ಶಾಲಾ ಶಿಕ್ಷಕರು, ಪ್ರೌಢಶಾಲಾ, ಪಪೂ ಕಾಲೇಜು, ಶಿಕ್ಷಕರು ನಮ್ಮನ್ನು ಸಂಪರ್ಕಿಸಿದ್ದು, ಹರೀಶ್ ಆಚಾರ್ಯ ಅವರ ಉಮೇದುವಾರಿಕೆಯನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.
ಸಂಘದ ನಿಟಕಪೂರ್ವ ಅಧ್ಯಕ್ಷ ಧೀರಜ್ ಕುಮಾರ್, ಕೋಶಾಧಿಕಾರಿ ರಂಜಿತ್ ಪಿ.ಜೆ., ಪದಾಧಿಕಾರಿ ಮಹಾಂತೇಶ್ ಉಪಸ್ಥಿತರಿದ್ದರು.