
Mangalore: ಶಿಕ್ಷಕರ ಪ್ರತ್ಯೇಕ ಸೇವಾ ಅಧಿನಿಯಮದ ಕಾಯಿದೆ ಅಗತ್ಯ ಇದೆ: ಡಾ. ಹರೀಶ್ ಆಚಾರ್ಯ
ಮಂಗಳೂರು: ರಾಜ್ಯದ ಪ್ರಸ್ತುತ ಕರ್ನಾಟಕ ನಾಗರಿಕ ಸೇವಾ ಅಧಿನಿಯಮ ಜಾರಿಯಲ್ಲಿದ್ದು, ಶಿಕ್ಷಕರ ಸಮಸ್ಯೆಗಳನ್ನು ಎದುರಿಸುವಲ್ಲಿ ಅತ್ಯಂತ ದುರ್ಬಲವಾಗಿದೆ. ಆದುದರಿಂದ ಶಿಕ್ಷಕರ ಪ್ರತ್ಯೇಕ ಸೇವಾ ಅಧಿನಿಯಮದ ಕಾಯಿದೆ ಜಾರಿಗೊಳ್ಳುವ ಅಗತ್ಯ ಇದೆ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ. ಹರೀಶ್ ಆಚಾರ್ಯ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಶಿಕ್ಷಕ ಸಂಘಟನೆಗಳ ಪ್ರಮುಖರು, ಶಿಕ್ಷಣ ತಜ್ಞರು ಹಾಗೂ ಕಾನೂನು ತಜ್ಞರ ಅಭಿಪ್ರಾಯ ಪಡೆದುಕೊಂಡು ವಿಧಾನ ಪರಿಷತ್ ನ ಮುಂದಿನ ಅಧಿವೇಶನದಲ್ಲಿ ಖಾಸಗಿ ಮಸೂದೆಯಾಗಿ ಮಂಡಿಸಲು ಬದ್ಧನಾಗಿರುತ್ತೇನೆ. ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ವರ್ಗದ ಶಿಕ್ಷಕರ ಬೆಂಬಲದೊಂದಿಗೆ ಚಳವಳಿಯ ರೂಪದಲ್ಲಿ ಹಕ್ಕೊತ್ತಾಯ ಮಾಡುವ ಮೂಲಕ ಈ ಮಸೂದೆಯನ್ನು ಅನುಷ್ಠಾನಗೊಳಿಸಲು ಕಾರ್ಯಬದ್ಧನಾಗಿದ್ದೇನೆ. ಖಾಸಗಿ ಶಾಲಾ ಕಾಲೇಜು, ಸರ್ಕಾರಿ ಶಾಲಾ-ಕಾಲೇಜು, ಅನುದಾನಿತ ಶಾಲಾ ಕಾಲೇಜು ಶಿಕ್ಷಕರ ಸಮಸ್ಯೆಗಳು, ದೈಹಿಕ ಶಿಕ್ಷಣ ಹಾಗೂ ಕಲಾ ಮತ್ತು ಕಸೂತಿ ಶಿಕ್ಷಕರ ಸಮಸ್ಯೆಗಳು, ವಸತಿ ಶಾಲಾ ಶಿಕ್ಷಕರ ಸಮಸ್ಯೆಗಳು, ಭಡ್ತಿ ಹೊಂದಿದ ಶಿಕ್ಷಕರ ಸಮಸ್ಯೆಗಳು, ಮುಖ್ಯೋ ಪಾಧ್ಯಾಯರು ಹಾಗೂ ಪ್ರಾಂಶುಪಾಲರ ಸಮಸ್ಯೆಗಳು, ಪಿಂಚಣೆಯ ಸಮಸ್ಯೆ, ಭರ್ತಿಯಾಗದೆ ಖಾಲಿ ಇರುವ ಶಿಕ್ಷಕ ಹುದ್ದೆಗಳ ಸಮಸ್ಯೆಗಳು, ಪರೀಕ್ಷಾ ಹಾಗೂ ಮೌಲ್ಯ ಮಾಪನ ಕಾರ್ಯ ನಿರ್ವಹಣಾ ಸಮಸ್ಯೆಗಳು ಇವೇ ಇತ್ಯಾದಿ ವಿಷಯಗಳು ಯಾವುದೇ ಪರಿಹಾರವನ್ನು ಕಾಣದೆ, ಪರಿಹಾರಗೊಳ್ಳುವ ನಿರೀಕ್ಷೆಯೂ ಇಲ್ಲದೆ ಹಾಗೆಯೇ ಮುಂದು ವರಿಯುತ್ತಿದೆ. ಇದಕ್ಕೆಲ್ಲ ಮೂಲ ಕಾರಣ ಪ್ರತ್ಯೇಕ ಅಧಿನಿಯಮ ರೂಪಿಸಬೇಕಾದ ಅಗತ್ಯವಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರಿಂದ ಹಿಡಿದು ಸ್ನಾತಕೋತ್ತರ ಪದವಿ ಶಿಕ್ಷಕರ ವೃತ್ತಿಯು ಇತರ ಸೇವಾ ವೃತ್ತಿಗಳಿಗಿಂತ ಭಿನ್ನವಾದುದಾಗಿದೆ. ಅವರು ಯಂತ್ರ ಅಥವಾ ಫೈಲುಗಳೊಂದಿಗೆ ಕೆಲಸ ಮಾಡುತ್ತಿಲ್ಲ. ಬೋಧನೆ ಮತ್ತು ಬೋಧನಾ ಪೂರಕ ಚಟುವಟಿಕೆಗಳ ಮೂಲಕ ದೇಶದ ಮಾನವ ಸಂಪನ್ಮೂಲ ಅಭಿವೃದ್ಧಿಯ ಮಹತ್ವದ ಕಾರ್ಯವನ್ನು ಅವರು ನಿರ್ವಹಿಸುತ್ತಿದ್ದಾರೆ. ಪುಟ್ಟಿ ಕಂದಮ್ಮಗಳಿಂದ ಹಿಡಿದು ಯುವ ಮನಸ್ಸುಗಳನ್ನು ಬೆಸೆಯುವ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸುತಿದ್ದಾರೆ. ಈ ಮಹತ್ತರ ಜವಾಬ್ದಾರಿಯ ಸೇವಾ ಕಾರ್ಯವು ಇತರ ಸೇವೆ ಮತ್ತು ವೃತ್ತಿ ಕಾರ್ಯಗಳಿಗಿಂತ ಸಂಪೂರ್ಣ ಭಿನ್ನವೇ ಆಗಿದೆ. ಈ ದೃಷ್ಟಿಯಿಂದ ಶಿಕ್ಷಕ ವೃತ್ತಿಯನ್ನು ಭಿನ್ನವಾಗಿ ಪರಿಗಣಿಸಿ ಶಿಕ್ಷಕರ ಪ್ರತ್ಯೇಕ ಸೇವಾ ಅಧಿನಿಯಮದ ಕಾಯ್ದೆಯನ್ನು ರೂಪಿಸಬೇಕಾದ ಅಗತ್ಯವಿದೆ ಎಂದರು.
ಶಿಕ್ಷಣ ಕ್ಷೇತ್ರದ ಸಾಧಕರಾದ ಪ್ರೊ. ರವಿಶಂಕರ್, ಸರಿತಾ ಶೆಟ್ಟಿ, ಜಿತಿನ್ ಜಿ ಜೊ, ಮಲ್ಲಿಕಾ ಅಮೀನ್ ಉಪಸ್ಥಿತರಿದ್ದರು.