
Mangalore: ನೀತಿ ಸಂಹಿತೆ ನಂತರ 7ನೇ ವೇತನ ಆಯೋಗ ಜಾರಿ: ಪುಟ್ಟಣ್ಣ
ಮಂಗಳೂರು: ರಾಜ್ಯದಲ್ಲಿ 7ನೇ ವೇತನ ಆಯೋಗದ ಶಿಫಾರಸನ್ನು ಜಾರಿ ಮಾಡುವುದಾಗಿ ಈಗಾಗಲೇ ಮುಖ್ಯಮಂತ್ರಿ ಭರವಸೆ ನೀಡಿದ್ದು, ನೀತಿ ಸಂಹಿತೆ ಮುಗಿದ ಕೂಡಲೆ ಜಾರಿಯಾಗಲಿದೆ ಎಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವಾಗ ಹೊಸ ಪಿಂಚಣಿ ಯೋಜನೆ ಜಾರಿಗೆ ತಂದಿದ್ದು, ಬಳಿಕ ರಾಜ್ಯದಲ್ಲೂ ಅದನ್ನು ಜಾರಿ ಮಾಡಿದ್ದರು. ಆದರೆ ಅನುದಾನಿತ ಶಿಕ್ಷಕರು, ಶಿಕ್ಷಕೇತರರಿಗೆ ಎನ್‌ಪಿಎಸ್, ಒಪಿಎಸ್ ಎರಡನ್ನೂ ಅನ್ವಯಿಸಿಲ್ಲ. ಈಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶಿಕ್ಷಕರ ಈ ಬಹುದೊಡ್ಡ ಬೇಡಿಕೆ ಈಡೇರಲಿದೆ. ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಸಮಿತಿ ರಚನೆಯೂ ಆಗಿದೆ ಎಂದರು.
2023ರ ಜನವರಿಯಲ್ಲಿ ಪಿಂಚಣಿ ವಂಚಿತ ಶಿಕ್ಷಕರ ಸಂಘ 141 ದಿನ ಚಳವಳಿ ಮಾಡಿತ್ತು. ಆಗ ನಾನು ಬಿಜೆಪಿಯಲ್ಲಿದ್ದೆ. ಆದರೆ ಆಗಿನ ಶಿಕ್ಷಣ ಸಚಿವರು ಬೇಡಿಕೆ ಈಡೇರಿಸಲು ಒಪ್ಪಲಿಲ್ಲ. ಚಳವಳಿಯ ೧೩೯ನೇ ದಿನ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡರೂ ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿ ಸಾಂತ್ವಾನದ ನುಡಿಯನ್ನೂ ಆಡಲಿಲ್ಲ. ಆದರೆ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಕಾಂಗ್ರೆಸ್ ಸರ್ಕಾರ ಬಂದರೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಅಂದೇ ಬಿಜೆಪಿ ಬಿಡಲು ತೀರ್ಮಾನಿಸಿದೆ. ಶಿಕ್ಷಕರ ಬೇಡಿಕೆ ಈಡೇರಿಸಲು ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಪುಟ್ಟಣ್ಣ ಹೇಳಿದರು.
ಪ್ರಸ್ತುತ ಶಿಕ್ಷಕರ ಕೊರತೆ, ಶಿಕ್ಷಣ ಸಂಸ್ಥೆಗಳ ರಿನಿವಲ್‌ಗೆ ಇರುವ ಕ್ಲಿಷ್ಟಕರ ನಿಯಮಗಳನ್ನು ಸರಳೀಕರಣ ಮಾಡಲಿದ್ದೇವೆ. ಅನುದಾನ ರಹಿತ ಶಿಕ್ಷಣ ಸಂಸ್ಥೆ ನೌಕರರಿಗೆ ಆರೋಗ್ಯ ವಿಮೆ ಮಾಡಲು ಒತ್ತಡ ತರುತಿದ್ದೇವೆ. ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಬದ್ಧವಾಗಿದ್ದೇವೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಸ್ವತಃ ಶಿಕ್ಷಕರಾಗಿ ಶಿಕ್ಷಕರ ಸಮಸ್ಯೆಗಳನ್ನು ಅರಿತಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಕೇವಲ 182 ಓಟಿನಿಂದ ಸೋತಿದ್ದು, ಅವರನ್ನು ಗೆಲ್ಲಿಸಿದರೆ ಸರ್ಕಾರ ಇರುವಾಗ ಬೇಡಿಕೆ ಈಡೇರಿಸಲು ಸುಲಭ ಆಗಲಿದೆ ಎಂದು ಪುಟ್ಟಣ್ಣ ತಿಳಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಸದಾಶಿವ ಉಳ್ಳಾಲ್, ಶುಭೋದಯ ಆಳ್ವ, ಲಾರೆನ್ಸ್ ಉಪಸ್ಥಿತರಿದ್ದರು.