
Mangalore: ರಸ್ತೆಯಲ್ಲಿ ನಮಾಜ್-ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಲು ಹಿಂದೂ ಜಾಗರಣ ವೇದಿಕೆ ಒತ್ತಾಯ
ಮಂಗಳೂರು: ಕಂಕನಾಡಿ ಮಸೀದಿಯೊಂದರ ಬಳಿಯ ರಸ್ತೆಯಲ್ಲಿ ನಮಾಜ್ ಮಾಡಿರುವ ಕುರಿತಂತೆ ದಾಖಲಾಗಿದೆ ಸುಮಟೊ ಕೇಸ್ ವಾಪಾಸ್ ಪಡೆಯಲಾಗಿದೆ. ಪೊಲೀಸರು ಮತ್ತೆ ಕೇಸು ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಒತ್ತಾಯಿಸಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ ನರಸಿಂಹ ಮಾಣಿ ಅವರು, ಪ್ರಕರಣಕ್ಕೆ ಸಂಬಂಧಿಸಿ ಬಿ ರಿಪೋರ್ಟ್ ಹಾಕುವ ಮೂಲಕ ಸರಕಾರ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದೆ. ಅವರ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಲು ಬಿಡಬೇಕು. ಇಂತಹ ನಡೆ ಸರಕಾರಕ್ಕೆ ಶೋಭೆಯಲ್ಲ ಎಂದರು.
ಅಲ್ಪಸಂಖ್ಯಾತರನ್ನು ಓಲೈಸುತ್ತಲೇ ಬಂದಿರುವ ರಾಜ್ಯ ಸರಕಾರ ಕಂಕನಾಡಿ ಪ್ರಕರಣದಲ್ಲೂ ಅದನ್ನೇ ಮುಂದುವರಿಸಿದೆ. ವಿನಾ ಕಾರಣ ಶರಣ್ ಪಂಪ್‌ವೆಲ್ ಮೇಲೆ ಕೇಸು ಹಾಕಲಾಗಿದೆ. ಈ ಕೇಸನ್ನು ಹಿಂಪಡೆಯಬೇಕು. ಒಂದು ವರ್ಗವನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದರು.
ಪೊಲೀಸ್ ಇಲಾಖೆ ಸರಿಯಾಗಿ ಕೆಲಸ ಮಾಡಬೇಕು. ಅವರ ಕೆಲಸಕ್ಕೆ ಸರಕಾರ ಅಡ್ಡಿಪಡಿಸಬಾರದು. ಅದು ಸಾಧ್ಯವಾಗದಿದ್ದರೆ ಇಲಾಖೆಯನ್ನೇ ಬರ್ಕಾಸ್ತು ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಪೊಲೀಸರ ಮೇಲೆ ಹಲ್ಲೆ, ಠಾಣೆಗಳ ಮೇಲೆ ದಾಳಿ ಮೊದಲಾದ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಮತಾಂಧರು ಪೊಲೀಸರನ್ನು ಗುರಿಯಾಗಿಸಿಕೊಂಡಿದ್ದಾರೆ. ಪೊಲೀಸರಿಗೂ ರಕ್ಷಣೆ ಇಲ್ಲದಂತಾಗಿದೆ. ಸಿಎಎ ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದಂತೆ ಮಂಗಳೂರಿನಲ್ಲಿಯೂ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿತ್ತು. ಸರಕಾರದಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವವರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಹೇಳಿದರು.
ರಸ್ತೆಯಲ್ಲಿ ನಮಾಜ್ ಮಾಡಿ ಸಾರ್ವಜನಿಕರಿಗೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಕೇಸ್ ದಾಖಲಿಸಬೇಕು. ಮತ್ತು ಆರೋಪಿಗಳ ವಿರುದ್ಧ ಕ್ರಮವಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಆಗಬಹುದಾದ ಅನಾಹುತಗಳಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೇ ಹೊಣೆಯಾಗಲಿದೆ ಎಂದರು.
ಹಿಂದೂ ಜಾಗರಣ ವೇದಿಕೆಯ ಮಂಗಳೂರು ಗ್ರಾಮಾಂತರ ಜಿಲ್ಲೆಯ ಸಹ ಸಂಚಾಲಕ ಸಮಿತ್‌ರಾಜ್ ಧರೆಗುಂಡಿ, ನಗರ ಸಂಚಾಲಕ ಹರ್ಷಿತ್ ಉಪಸ್ಥಿತರಿದ್ದರು.