Mangalore: ‘ಕುಟುಂಬ ರಾಜಕಾರಣದಿಂದ ಬಿಜೆಪಿಯನ್ನು ಮುಕ್ತಗೊಳಿಸಬೇಕಿದೆ’: ಕೆ.ಎಸ್. ಈಶ್ವರಪ್ಪ

Mangalore: ‘ಕುಟುಂಬ ರಾಜಕಾರಣದಿಂದ ಬಿಜೆಪಿಯನ್ನು ಮುಕ್ತಗೊಳಿಸಬೇಕಿದೆ’: ಕೆ.ಎಸ್. ಈಶ್ವರಪ್ಪ


ಮಂಗಳೂರು: ಕುಟುಂಬ ರಾಜಕಾರಣದಿಂದ ಬಿಜೆಪಿಯನ್ನು ಶುದ್ಧೀಕರಣಗೊಳಿಸಲು ಈ ಬಾರಿಯ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ರಘುಪತಿ ಭಟ್ ಅವರನ್ನು ಬೆಂಬಲಿಸುವಂತೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಬಿಜೆಪಿ ಪದವೀಧರ ಮತದಾರರನ್ನು ವಿನಂತಿಸಿದ್ದಾರೆ.

ನಗರದ ಪತ್ರಿಕಾ ಭವನದಲಿವಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಈಗ ಅಪ್ಪ, ಮಕ್ಕಳ ಪಕ್ಷವಾಗಿದೆ. ಪಕ್ಷದ ತತ್ವ, ಸಿದ್ಧಾಂತಕ್ಕಿಂತಲೂ ಕುಟುಂಬ ರಾಜಕಾರಣವೇ ಮೇಳೈಸುತ್ತಿದೆ. ಇದನ್ನು ನೋಡಿ ಬಿಜೆಪಿ ನಿಷ್ಠ ಕಾರ್ಯಕರ್ತರಿಗೆ ನೋವಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಅವರು ಕೇಂದ್ರ ಬಿಜೆಪಿ ಸಂಸದೀಯ ಸಮಿತಿಯಲ್ಲಿದ್ದರೆ, ಪುತ್ರರಾದ ರಾಘವೇಂದ್ರ ಸಂಸದರಾಗಿದ್ದಾರೆ, ವಿಜಯೇಂದ್ರ ಶಾಸಕ ಮಾತ್ರವಲ್ಲ ರಾಜ್ಯ ಬಿಜೆಪಿ ಅಧ್ಯಕ್ಷರೂ ಆಗಿದ್ದಾರೆ. ಇವರ ಮೂಗಿನ ನೇರಕ್ಕೆ ಬಿಜೆಪಿ ಚಟುವಟಿಕೆಗಳು ನಡೆಯುತ್ತಿದೆ. ಕೇಂದ್ರ ನಾಯಕರೂ ಕೂಡ ಬಿಎಎಸ್‌ವೈ  ಬಿಟ್ಟರೆ ಬೇರೆ ಯಾರೂ ಕರ್ನಾಟಕದಲ್ಲಿ ಇಲ್ಲ ಎನ್ನುವ ಭ್ರಮೆಯಲ್ಲಿ ಇದ್ದಾರೆ. ಇದನ್ನು ಸರಿಪಡಿಸಬೇಕಾದರೆ, ಬಿಜೆಪಿಗಾಗಿ ಜೀವನ ಸವೆಸಿದ ರಘುಪತಿ ಭಟ್ ಅಂತಹವರನ್ನು ಪರಿಷತ್ ಚುನಾವಣೆಯಲ್ಲಿ ಆರಿಸಬೇಕು. ಆಗ ಮಾತ್ರ ರಾಜ್ಯ ಬಿಜೆಪಿಯನ್ನು ಪೂರ್ತಿಯಾಗಿ ಶುದ್ಧೀಕರಣ ಮಾಡಲು ಸಾಧ್ಯವಿದೆ ಎಂದು ಪ್ರತಿಪಾದಿಸಿದರು.

ಬಿಜೆಪಿಯಲ್ಲಿ ಕುಟುಂಬ ರಾಜಕಾರಣದಿಂದಾಗಿ ರಾಷ್ಟ್ರೀಯತೆ ಬದಲು ಜಾತೀಯತೆ, ಸಾಮೂಹಿಕ ನಾಯಕತ್ವ ಹೋಗಿ ಸರ್ವಾಧಿಕಾರಿ ನೇತೃತ್ವ ಆಗುತ್ತಿದೆ. ಕುಟುಂಬ ರಾಜಕಾರಣ ಓಲೈಸುವವರಿಗೆ ಮಾತ್ರ ಬಿಜೆಪಿಯಲ್ಲಿ ಮಣೆ ಹಾಕುತ್ತಾರೆ. ಇದನ್ನು ವಿರೋಧಿಸಿದ್ದಕ್ಕೆ ನನಗೆ ಹಾಗೂ ಮಾಜಿ ಶಾಸಕ ರಘಪತಿ ಭಟ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸಿಎಂ, ಡಿಸಿಎಂ ಜೊತೆ ಗುರುತಿಸಿಕೊಂಡಿರುವ ಮಾಜಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್ ವಿರುದ್ಧ ಕ್ರಮದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಾಧ್ಯಕ್ಷ ಒಬ್ಬ ಬಚ್ಚಾ ಇದ್ದಾನೆ. ಏನು ಶಿಸ್ತು ಕ್ರಮ ಎಂದು ಅವರನ್ನೇ ಕೇಳಿದರೆ ಗೊತ್ತಾಗಬಹುದು ಎಂದರು. 

ಬಿಜೆಪಿ ಹಾಗೂ ಸಂಘಪರಿವಾರಕ್ಕೆ ವಿರುದ್ಧವಾಗಿ ವರ್ತಿಸಿದ ವ್ಯಕ್ತಿಗೆ ಜಾತಿ ಹಾಗೂ ಹಣ ಬಲದಿಂದ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿದೆ ಎಂದು ಆರೋಪಿಸಿದರು.

ನೈಋತ್ಯ ಪದವೀಧರ ಕ್ಷೇತ್ರದಾದ್ಯಂತ ರಘುಪತಿ ಭಟ್ಗೆ ಬಹಿರಂಗ ಬೆಂಬಲ ವ್ಯಕ್ತವಾಗುತ್ತಿದೆ. ಬಿಜೆಪಿ ಪಕ್ಷದಲ್ಲಿ ಸ್ಥಾನಕ್ಕೆ ಅಪೇಕ್ಷೆ ಪಡುವವರು ಪಕ್ಷ ಶುದ್ಧೀಕರಣಕ್ಕಾಗಿ ಮೊದಲು ಚಿಂತಿಸಿ ರಘುಪತಿ ಭಟ್ರನ್ನು ಬೆಂಬಲಿಸಿ. ಹಿಂದುತ್ವ, ರಾಷ್ಟ್ರೀಯತೆ ಉಳಿಯಬೇಕಾದರೆ, ಕಾಂಗ್ರೆಸ್ ಸಂಸ್ಕೃತಿ ರೀತಿಯ ಕುಟುಂಬ ರಾಜಕಾರಣದಿಂದ ಬಿಜೆಪಿಯನ್ನು ಮುಕ್ತಗೊಳಿಸಿ ಎಂದು ಬಿಜೆಪಿ ಕಾರ್ಯಕರ್ತರನ್ನು ವಿನಂತಿಸುವುದಾಗಿ ಹೇಳಿದರು.

ರಾಯಣ್ಣ ಬ್ರಿಗೇಡ್..:

ರಾಯಣ್ಣ ಬ್ರಿಗೇಡ್‌ಗೆ ಪುನರ್ ಚಾಲನೆ ನೀಡಲು ನಿರ್ಧರಿಸಲಾಗಿದೆ. ಲೋಕಸಭಾ ಚುನಾವಣಾ ಫಲಿತಾಂಶ ಬಳಿಕ ಪ್ರಮುಖರ ಸಭೆ ಕರೆದು ಸಮಾಲೋಚನೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಹಿಂದೆ ರಾಯಣ್ಣ ಬ್ರಿಗೇಡ್ ಸ್ಥಾಪಿಸಿದ್ದಾಗ ಅದನ್ನು ಬರ್ಖಾಸ್ತುಗೊಳಿಸುವಂತೆ ಬಿಎಸ್‌ವೈ ದೂರಿನ ಮೇರೆಗೆ ಅಮಿತ್ ಶಾ ಸೂಚನೆ ನೀಡಿದ್ದರು. ಈಗ ಬ್ರಿಗೇಡ್ನ್ನು ಮತ್ತೆ ಚಾಲನೆಗೊಳಿಸಲು ಉದ್ದೇಶಿಸಲಾಗಿದೆ ಎಂದರು.

ಅಲ್ಪಸಂಖ್ಯಾತರ ಬೀಗರಂತೆ ವರ್ತಿಸುವ ಕಾಂಗ್ರೆಸ್, ಅವರನ್ನು ಇನ್ನೂ ಉದ್ಧಾರ ಮಾಡಿಲ್ಲ. ಅಲ್ಪಸಂಖ್ಯಾತರ ಬಿಜೆಪಿಯನ್ನು ನಂಬುವುದಿಲ್ಲ, ಹಾಗೆಂದು ಕಾಂಗ್ರೆಸ್ ಅವರನ್ನು ಉದ್ಧರಿಸಿಲ್ಲ ಎಂದರು.

ನಗರ ಪಾಲಿಕೆ ಮಾಜಿ ಸದಸ್ಯ ನವೀನ್‌ಚಂದ್ರ, ಉದ್ಯಮಿಗಳಾದ ಕೃಷ್ಣ ಶೆಟ್ಟಿ, ಮಹೇಶ್, ಉಮೇಶ್ ಆರಾಧ್ಯ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article