
Mangalore: ವೈದ್ಯಕೀಯ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್-ಅಪ್ರಾಪ್ತ ಯುವಕ ಸೆರೆ
ಮಂಗಳೂರು: ನಗರದ ಬಾವುಟಗುಡ್ಡೆ ವೈದ್ಯಕೀಯ ಕಾಲೇಜೊಂದರ ಮಹಿಳಾ ಶೌಚಾಲಯದಲ್ಲಿ ರಹಸ್ಯವಾಗಿ ಮೊಬೈಲ್ ಇಟ್ಟು ಚಿತ್ರೀಕರಣ ಮಾಡಿರುವ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅಪ್ರಾಪ್ತನೋರ್ವನನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ.
ಕಾಲೇಜಿನ ಸೆಕ್ಯುರಿಟಿ ಫೀಲ್ಡ್ ಮ್ಯಾನೇಜರ್ ರಾಜು ಎಂಬವರಿಗೆ ಮೇ 6ರ ಸಂಜೆ 1ನೇ ಮಹಡಿಯ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ರಿಂಗಣಿಸಿದ್ದು ಕೇಳಿಸಿದೆ. ತಕ್ಷಣ ಹೋಗಿ ನೋಡಿದಾಗ ಶೌಚಾಲಯದ ಒಳಗೆ ಮೇಲ್ಭಾಗದ ಕ್ಯಾಸ್ಟ್ ಪ್ಯಾನ್ ಬಳಿ ಮೊಬೈಲ್ ಫೋನ್ ಇಟ್ಟಿರುವುದು ಪತ್ತೆಯಾಗಿದೆ. ಯಾರೋ ಮೊಬೈಲ್ ಫೋನ್ ಇಟ್ಟು ಮಹಿಳೆಯರು ಶೌಚ ಮಾಡುವ ದೃಶ್ಯ ಸೆರೆಹಿಡಿಯಲು ಇರಿಸಿದಂತೆ ಕಂಡುಬರುತ್ತಿತ್ತು. ಅನುಮಾನ ಬಂದು ಅವರು ಮಂಗಳೂರು ಉತ್ತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ 'ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಶೌಚಾಲಯದಲ್ಲಿ ಯಾರೂ ಇಲ್ಲದ ವೇಳೆಯೂ ಮೊಬೈಲ್ ರಿಂಗಾಗುತ್ತಿದ್ದುದನ್ನು ಕಾಲೇಜಿನ ಭದ್ರತಾ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಫೋನ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಆರೋಪಿ 17 ವರ್ಷದ ಅಪ್ರಾಪ್ತನಾಗಿದ್ದು, ರೋಗಿಯ ವೇಷದಲ್ಲಿ ಕಾಲೇಜಿಗೆ ಬಂದಿದ್ದ. ಆತನನ್ನು ಬಂಧಿಸಿ ಬಾಲ ನ್ಯಾಯಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ' ಎಂದಿದ್ದಾರೆ.