
Udupi: ತೀವ್ರ ಎಡಪಂಥೀಯರ ಕಪಿಮುಷ್ಟಿಯಲ್ಲಿ ರಾಜ್ಯ ಸರ್ಕಾರ: ಬಿ.ಎಲ್. ಸಂತೋಷ್
ಉಡುಪಿ: ಕರ್ನಾಟಕದಲ್ಲಿ ಹೆಸರಿಗೆ ಮಾತ್ರ ಕಾಂಗ್ರೆಸ್ ಇದ್ದು, ತೀವ್ರ ಎಡಪಂಥೀಯರ ಕಪಿಮುಷ್ಟಿಯಲ್ಲಿ ಸರ್ಕಾರ ಇದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ‍್ಯದರ್ಶಿ ಬಿ.ಎಲ್. ಸಂತೋಷ್ ಆರೋಪಿಸಿದರು.
ವಿಧಾನ ಪರಿಷತ್ ನೈಋತ್ಯ ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಗುರುವಾರ ನಡೆದ ಜಿಲ್ಲಾ ಮಟ್ಟದ ಘಟ ನಾಯಕರ ಸಮಾವೇಶದಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರ ಜಾರಿಗೆ ತಂದ ಕೇಂದ್ರೀಯ ಶಿಕ್ಷಣ ನೀತಿಗೆ ಬದಲಾಗಿ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರುವುದಾಗಿ ಕೇವಲ ಎಡಪಂಥೀಯರು ಹಾಗೂ ಹಿಂದೂ ಮತ್ತು ರಾಷ್ಟ್ರೀಯ ವಿರೋಧಿಗಳನ್ನು ಸೇರಿಸಿಕೊಂಡು ಸಮಿತಿ ರಚಿಸಿದರು. ಆದರೆ, ಇದುವರೆಗೆ ರಾಜ್ಯ ಶಿಕ್ಷಣ ನೀತಿಯನ್ನೂ ರೂಪಿಸಿಲ್ಲ, ಕೇಂದ್ರೀಯ ಶಿಕ್ಷಣ ನೀತಿಯನ್ನೂ ಜಾರಿಗೊಳಿಸಿಲ್ಲ.
ವ್ಯಾವಹಾರಿಕ ಪ್ರಣಾಳಿಕೆ ಮೂಲಕ ಅಧಿಕಾರ ಪಡೆದುಕೊಂಡ ಕಾಂಗ್ರೆಸ್ ಸರ್ಕಾರ ಕೇವಲ ಸ್ಥಾನ ಉಳಿಸಿಕೊಳ್ಳುವುದು ಮತ್ತು ಸ್ಥಾನ ಪಡೆದುಕೊಳ್ಳುವ ಹೋರಾಟದಲ್ಲಿಯೇ ಸಾಗುತ್ತಿದೆ. ಬಿಜೆಪಿ ಆರಂಭದಿಂದಲೇ ಹೇಳಿದಂತೆ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಬೊಕ್ಕಸ ಬರಿದಾಗಿದೆ. ಕಳೆದ ಮೂರು ತಿಂಗಳಿಂದ ನೌಕರರಿಗೆ ಸಂಬಳ ಕೊಡಲು ಸರ್ಕಾರದಲ್ಲಿ ಹಣವಿಲ್ಲ. ಅನ್ನಭಾಗ್ಯದ ಹಣ ಮೂರು ತಿಂಗಳಿಂದ ಪಾವತಿಯಾಗಿಲ್ಲ. ಅಭಿವೃದ್ಧಿಯಂತೂ ಇಲ್ಲವೇ ಇಲ್ಲ. ಇದನ್ನು ಕಾಂಗ್ರೆಸ್ ಶಾಸಕರೂ ಒಪ್ಪಿಕೊಳ್ಳುತ್ತಾರೆ ಎಂದರು. ಇಂಥ ಸರ್ಕಾರಕ್ಕೆ ಜೂನ್ 4ರಂದು ಎಳ್ಳುನೀರು ಬಿಡುವ ಕಾಲ ಸನ್ನಿಹಿತವಾಗಿದೆ ಎಂದರು.
ಸ್ವಾರ್ಥರಹಿತ ಸಮಾಜ ಹಿತ ಮತ್ತು ಸಂಘಟನೆಗೆ ಪ್ರಾಮುಖ್ಯತೆ ಕೊಡುವುದು ರಾಜಕಾರಣಿಯ ಕರ್ತವ್ಯವಾಗಬೇಕು. ವ್ಯಕ್ತಿಗಿಂತ ಪಕ್ಷ ಮತ್ತು ಸಂಘಟನೆ ಮುಖ್ಯ. ಈ ಧ್ಯೇಯವನ್ನು ಬಿಜೆಪಿ ಪಾಲಿಸಿಕೊಂಡು ಬಂದಿದೆ. ಸ್ವಾರ್ಥಕ್ಕಾಗಿ ಒಬ್ಬರು, ತನ್ನ ಮಗನಿಗೆ ಸೀಟು ಸಿಗಲಿಲ್ಲ ಎಂದು ಇನ್ನೊಬ್ಬರು, ಅವಕಾಶ ಕೊಡಲಿಲ್ಲ ಎಂದು ಮತ್ತೊಬ್ಬರು ಬಿಜೆಪಿ ಬಿಟ್ಟು ಹೋದವರಿದ್ದಾರೆ. ಅಂಥವರ ಬಗ್ಗೆ ತಲೆಕೆಡಿಸಿಕೊಳ್ಳಕೂಡದು. ಪಕ್ಷವೇ ಮುಖ್ಯ ಎಂದು ಪರಿಗಣಿಸಬೇಕು. ಪಕ್ಷದ ವಿರುದ್ಧ ವರ್ತಿಸುವ ಯಾರೇ ಆಗಲಿ, ಅವರೊಂದಿಗೆ ಯಾವುದೇ ಭಾವನಾತ್ಮಕ ಸಂಬಂಧವಿರಲಿ ತೊರೆದು ಪಕ್ಷದ ವಿಚಾರದಲ್ಲಿ ರಾಜೀ ಕೂಡದು ಎಂದರು.
ಈ ಬಾರಿಯ ವಿಧಾನ ಪರಿಷತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇತರ ಚುನಾವಣೆಗಳಿಗಿಂತ ಭಿನ್ನವಾಗಿದ್ದು ಮತದಾರರ ವೈಯಕ್ತಿಕ ಭೇಟಿ, ಮತದಾನದ ರೀತಿ ಮತ್ತು ಮತಗಟ್ಟೆಗೆ ತಲುಪುವ ಬಗ್ಗೆ ತಿಳಿದುಕೊಂಡು ಸಹಕರಿಸಬೇಕು. ಆಗ ಜಯ ಕಟ್ಟಿಟ್ಟ ಬುತ್ತಿ ಎಂದರು.
ರಾಮ ಮಂದಿರಕ್ಕಾಗಿ ಬಂಡಾಯವೋ:
ಹಿಂದುಗಳ ಹಿತಕ್ಕಾಗಿಯೋ ಅಥವಾ ರಾಮ ಮಂದಿರಕ್ಕಾಗಿಯೋ ಬಂಡಾಯ ಮಾಡಿದ್ದರೆ ಒಪ್ಪಿಕೊಳ್ಳಬಹುದಾಗಿತ್ತು. ಆದರೆ, ಇದು ಕೇವಲ ವ್ಯಕ್ತಿಗತ ಸ್ವಾರ್ಥಕ್ಕಾಗಿ ಬಂಡಾಯ. ದೇಶ ಹಿತ ಮತ್ತು ಸಂಘಟನೆಯ ಗೆರೆ ಮೀರಿ ಹೋಗುವವರನ್ನು ಒಪ್ಪಿಕೊಳ್ಳಬಾರದು ಎಂದು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯವಾಗಿ ಸ್ಪರ್ಧಿಸಿರುವ ಕೆ. ರಘುಪತಿ ಭಟ್ ವಿರುದ್ದ ಬಿ. ಎಲ್. ಸಂತೋಷ್ ತೀವ್ರ ವಾಗ್ದಾಳಿ ನಡೆಸಿದರು.
ಅಧಿಕಾರದಿಂದ ಒಂದು ವರ್ಷ ದೂರವಿರುವುದಕ್ಕೆ ಆಗುವುದಿಲ್ಲ ಎಂದರೆ ಅದರಲ್ಲಿ ಅಂಥ ಆಯಸ್ಕಾಂತ ಶಕ್ತಿ ಏನಿದೆ? ಎಲ್ಲಾ ಅಧಿಕಾರ ಅನುಭವಿಸಿಯೂ ಮತ್ತೆ ಟಿಕೆಟ್ ಸಿಗದಿದ್ದರೆ ತಮಗೆ ಅನ್ಯಾಯ ಆಗಿದೆ ಎನ್ನುವುದಾದರೇ ಪಕ್ಷದಲ್ಲಿ ಹತ್ತಾರು ವರ್ಷಗಳಿಂದ ದುಡಿಯುತ್ತಿರುವವರಿಗೆ ಒಂದು ಬಾರಿಯೂ ಟಿಕೆಟ್ ಸಿಗದಿದ್ದಾಗ ಅವರು ಏನೆನ್ನಬೇಕು? ಪಕ್ಷದ ಕಾರ್ಯಕರ್ತರಲ್ಲಿಯೂ ಆಕಾಂಕ್ಷೆಗಳಿವೆ, ಅವುಗಳಿಗೆ ಏನು ಬೆಲೆ ಬೇಸರ ವ್ಯಕ್ತಪಡಿಸಿದರು.
ನಿತ್ಯ ವ್ಯಸನಿಗಳಿಗೆ ಒಂದು ದಿನ ಗುಟ್ಕ, ಸಾರಾಯಿ ಸಿಗದಿದ್ದರೆ ಹೇಗೆ ಆಡುತ್ತಾರೋ ಹಾಗೆ ಒಂದು ವರ್ಷ ಅಧಿಕಾರದಿಂದ ದೂರವಿದ್ದ ಕೆಲವರು ಆಡುತಿದ್ದಾರೆ. ಪಕ್ಷಕ್ಕಾಗಿ ಹತ್ತಿಪ್ಪತ್ತು ವರ್ಷಗಳಿಂದ ದುಡಿಯುತ್ತಿರುವ ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಬಂಡಾಯ ಎದ್ದಿಲ್ಲ. ಈ ಬಾರಿ ಮತದಾರರ ನೋಂದಣಿಗೆ ದುಡಿದ ವಿಕಾಸ್ ಪುತ್ತೂರು ಅವರಿಗೆ ಬಂಡಾಯ ಏಳುವ ಅರ್ಹತೆ ಇದ್ದರೂ, ಪಕ್ಷದ ಆದೇಶದಂತೆ ಸುಮ್ಮನಿದ್ದಾರೆ ಎಂದರು.
ಕಳೆದ ಚುನಾವಣೆಯಲ್ಲಿ ಪಕ್ಷದಿಂದ ಆಯನೂರು ಮಂಜುನಾಥ್ ಹೊರಗೆ ಹೋದರು. ಈ ಬಾರಿ ಚುನಾವಣೆಯಲ್ಲಿ ರಘುಪತಿ ಭಟ್ ಹೊರಗೆ ಹೋಗಿದ್ದಾರೆ. ಅವರಿಬ್ಬರೂ ಬಿಜೆಪಿ ವಿರುದ್ಧ ಸ್ಪರ್ಧಿಸಿರುವುದರಿಂದ, ಬಿಜೆಪಿ ಮತದಾರರದ್ದು ಯುದ್ಧಭೂಮಿಯಲ್ಲಿ ತನ್ನ ಸಂಬಂಧಿಕರೊಂದಿಗೆ ಯುದ್ದ ಮಾಡುವಾಗ ಆತ್ಮಗ್ಲಾನಿಗೆ ಒಳಗಾದ ಅರ್ಜುನನ ಪರಿಸ್ಥಿತಿಯಾಗಿದೆ ಎಂದು ಸಂತೋಷ್ ನುಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನಿಲ್ ಕುಮಾರ್, ಯಶಪಾಲ್ ಸುವರ್ಣ ಮತ್ತು ಗುರುರಾಜ್ ಗಂಟಿಹೊಳಿ, ಪಕ್ಷ ಪ್ರಮುಖರಾದ ಉದಯಕುಮಾರ್ ಶೆಟ್ಟಿ, ಸುರೇಶ ನಾಯಕ್ ಕುಯಿಲಾಡಿ, ಪ್ರಮೋದ್ ಮಧ್ವರಾಜ್, ವಿಕಾಸ್ ಪುತ್ತೂರು ಇದ್ದರು.
ಬಿಜೆಪಿ ಪ್ರಧಾನ ಕಾರ‍್ಯದರ್ಶಿಗಳಾದ ರೇಶ್ಮಾ ಉದುಕುಮಾರ್ ಸ್ವಾಗತಿಸಿ, ದಿನಕರ ಶೆಟ್ಟಿ ಹೆರ್ಗ ನಿರೂಪಿದರು. ಉಪಾಧ್ಯಕ್ಷ ಪ್ರಕಾಶ ಶೆಟ್ಟಿ ವಂದಿಸಿದರು.