Udupi: ಬಿಜೆಪಿ ಗೆಲುವಿಗೆ ಶಾಸಕರ ಪಣ: ಕೋಟ ಶ್ರೀನಿವಾಸ ಪೂಜಾರಿ

Udupi: ಬಿಜೆಪಿ ಗೆಲುವಿಗೆ ಶಾಸಕರ ಪಣ: ಕೋಟ ಶ್ರೀನಿವಾಸ ಪೂಜಾರಿ


ಉಡುಪಿ: ಜೂನ್ 3ರಂದು ನಡೆಯುವ ವಿಧಾನ ಪರಿಷತ್ ನೈಋತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು ಪಣ ತೊಟ್ಟಿರುವುದಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ 85 ಸಾವಿರ ಪದವೀಧರರು ಮತ್ತು 24 ಸಾವಿರ ಶಿಕ್ಷಕ ಮತದಾರರಿದ್ದು, ಈಗಾಗಲೇ ಬಿಜೆಪಿ ಪ್ರಥಮ ಮತ ಯಾಚನೆ ಪ್ರಕ್ರಿಯೆ ಪೂರ್ತಿಗೊಳಿಸಿದೆ. ಅಂತಿಮ ಹಂತದ ಮತ ಯಾಚನೆ ಪ್ರಕ್ರಿಯೆಯಲ್ಲಿ ತೊಡಗಿದೆ. ಪ್ರತೀ 25 ಮತದಾರರಿಗೆ ಘಟ ನಾಯಕರನ್ನು ನೇಮಿಸಿದ್ದು ಅವರು ಮತದಾರರನ್ನು ಸಂಪರ್ಕಿಸಿ, ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದಾರೆ. ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಆಯಾ ಶಾಸಕರನ್ನು ಹೊಣೆಗಾರರನ್ನಾಗಿಸಲಾಗಿದೆ. ಎಲ್ಲರೂ ಉತ್ಸಾಹದಿಂದ, ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಗೆಲುವಿಗೆ ಯತ್ನಿಸುವ ಮೂಲಕ ಡಾ. ವಿ.ಎಸ್. ಆಚಾರ‍್ಯರ ಬಳಿಕ ಓರ್ವ ವೈದ್ಯನನ್ನು ಚಿಂತಕರ ಚಾವಡಿಗೆ ಕಳಿಸುವ ಯತ್ನ ಮಾಡಲಾಗುತ್ತಿದೆ. ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಮರು ಆಯ್ಕೆ ಬಯಸಿರುವ ಜೆಡಿಎಸ್ ಅಭ್ಯರ್ಥಿ ಎಸ್. ಎಲ್. ಭೋಜೇಗೌಡರನ್ನು ಗೆಲ್ಲಿಸುವಂತೆ ಮನವಿ ಮಾಡಲಾಗುತ್ತಿದೆ ಎಂದರು.

ಈ ಬಾರಿ ರಘುಪತಿ ಭಟ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆಗೆ ಗಾಂಭೀರ‍್ಯತೆ ಬಂದಿದೆ ಎಂದರು.

ಶಾಸಕರಾದ ಯಶಪಾಲ್ ಸುವರ್ಣ ಮತ್ತು ಗುರುರಾಜ ಗಂಟಿಹೊಳಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಪಕ್ಷ ಪ್ರಮುಖರಾದ ಉದಯಕುಮಾರ್ ಶೆಟ್ಟಿ, ವಿಜಯ ಕುಮಾರ್ ಉದ್ಯಾವರ, ಶಿಲ್ಪಾ ಸುವರ್ಣ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article