Udupi: ರಘುಪತಿ ಭಟ್‌ಗೆ ಪಕ್ಷದಿಂದ ಅನ್ಯಾಯವಾಗಿಲ್ಲ: ಬಿ.ವೈ. ವಿಜಯೇಂದ್ರ
Tuesday, May 28, 2024
ಉಡುಪಿ: ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರಿಗೆ ಬಿಜೆಪಿಯಿಂದ ಯಾವುದೇ ಅನ್ಯಾಯವಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಸೋಮವಾರ ನಡೆದ ಬಿಜೆಪಿ ಘಟ ನಾಯಕರ ಸಮಾವೇಶಕ್ಕಾಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮೂರು ಬಾರಿ ಶಾಸಕರಾಗಿದ್ದ ಅವರು ಪಕ್ಷದಿಂದ ಸಾಕಷ್ಟು ಅನುಭವಿಸಿದ್ದಾರೆ. ಇದೀಗ ಪಕ್ಷಕ್ಕೆ ತೊಡಕನ್ನೂ ಮಾಡಿದ್ದಾರೆ. ಪಕ್ಷಕ್ಕಾಗಿ ಅನೇಕ ವರ್ಷಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ದುಡಿದ ಕಾರ‍್ಯಕರ್ತರು ಅನೇಕರಿದ್ದಾರೆ. ಅಂಥವರಿಗೂ ಅವಕಾಶ ಸಿಗಬೇಕಾಗಿದೆ. ತಾನು ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ಭ್ರಮೆಯಲ್ಲಿ ಭಟ್ ಇದ್ದಾರೆ. ಅವರ ಬಗ್ಗೆ ಹೆಚ್ಚು ಮಾತನಾಡಲಾರೆ ಎಂದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್ ಸುವರ್ಣ, ಸುನಿಲ್ ಕುಮಾರ್ ಮತ್ತು ಗುರ್ಮೆ ಸುರೇಶ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮೊದಲಾದವರಿದ್ದರು.