
Udupi: ಬದುಕಿನ ಅನನ್ಯತೆ ಅರಿವಿಗೆ ಸಾಹಿತ್ಯ ಸಹಕಾರಿ: ಡಾ. ನಿಕೇತನ
ಉಡುಪಿ: ಬದುಕಿನ ಅನನ್ಯತೆಯ ಅರಿವಿಗೆ ಸಾಹಿತ್ಯ ಸಹಕಾರಿ ಎಂದು ಅಜ್ಜರಕಾಡು ಡಾ. ಜಿ. ಶಂಕರ್ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥೆ, ಸಾಹಿತಿ ಡಾ. ನಿಕೇತನ ಹೇಳಿದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಉಡುಪಿ ತಾಲೂಕು ಘಟಕ ಆಶ್ರಯದಲ್ಲಿ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಉಡುಪಿ ಸಹಯೋಗದೊಂದಿಗೆ ಮಂಗಳವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನ ದಿನಾಚರಣೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕೋಟ ಡಾ. ಶಿವರಾಮ ಕಾರಂತ ದತ್ತಿ ಉಪನ್ಯಾಸ ನೀಡಿದರು.
ಕಾರಂತರ ಕೃತಿಗಳು ಓದುಗರನ್ನು ಸಹೃದಯಿಗಳನ್ನಾಗಿಸುತ್ತದೆ. ವೈಚಾರಿಕ ದೃಷ್ಟಿಕೋನ ಬೆಳೆಸುತ್ತದೆ. ಪದವೀಧರರು ವಿದ್ಯಾವಂತರೆನಿಸಿಕೊಳ್ಳುವುದಿಲ್ಲ. ವಿದ್ಯೆಯ ಜೊತೆಗೆ ವಿವೇಕ ಮೂಡಲು ಸಾಹಿತ್ಯ ಓದಬೇಕು. ಬದುಕನ್ನು ಸಂಭ್ರಮಿಸಬೇಕಾದರೆ ವರ್ತಮಾನದಲ್ಲಿ ಜೀವಿಸಬೇಕು. ಅದರಿಂದ ವ್ಯಕ್ತಿ ಶಕ್ತಿಯಾಗಲು ಸಾಧ್ಯ. ಸಣ್ಣ ವಿಷಯಗಳಿಗೆ ಆತ್ಮಹತ್ಯೆಗೆ ಮುಂದಾಗುವ ಎಳೆ ಮನಸ್ಸುಗಳು ಕಾರಂತರ ಕೃತಿಗಳನ್ನು ಓದಿದರೆ ಅಂಥ ಆಲೋಚನೆಗಳೇ ಹುಟ್ಟುಕೊಳ್ಳುವುದಿಲ್ಲ ಎಂದರು.
ಜೀವನಕ್ಕಾಗಿ ಆಯುರ್ವೇದ ವಿಷಯ ಕುರಿತು ಮಾತನಾಡಿದ ಜಿಲ್ಲಾ ಆಯುಷ್ ಆಸ್ಪತ್ರೆ ವೈದ್ಯೆ ಡಾ. ಸ್ವಾತಿ ಶೇಟ್, ಉತ್ತಮ ಆರೋಗ್ಯಕರ ಜೀವನಕ್ಕೆ ಆಯುರ್ವೇದ ಪೂರಕ. ದಿನನಿತ್ಯದ ಜೀವನದಲ್ಲಿ ಪೌಷ್ಠಿಕ ಆಹಾರವನ್ನು ಹಿತಮಿತದಲ್ಲಿ ಸೇವಿಸುವುದರೊಂದಿಗೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಕಾರ‍್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉದ್ಘಾಟಿಸಿದರು. ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಪ್ರಾಂಶುಪಾಲೆ ಪ್ರೊ. ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್ ಶೆಣೈ, ಕಸಾಪ ಬೈಂದೂರು ತಾಲೂಕು ಅಧ್ಯಕ್ಷ ಡಾ. ರಘು ನಾಯ್ಕ, ತಾಲೂಕು ಗೌರವ ಕಾರ್ಯದರ್ಶಿ ರಂಜಿನಿ ವಸಂತ್ ಆಗಮಿಸಿದ್ದರು.
ಉಡುಪಿ ತಾಲೂಕು ಕಸಾಪ ಅಧ್ಯಕ್ಷ ರವಿರಾಜ್ ಎಚ್. ಪಿ. ಆಶಯ ನುಡಿಗಳನ್ನಾಡಿದರು. ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಸ್ವಾಗತಿಸಿದರು. ಜಿಲ್ಲಾ ಘಟಕದ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್ ವಂದಿಸಿದರು. ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.