
Bantwal: ಕಲ್ಲಡ್ಕ ಹದಗೆಟ್ಟ ರಸ್ತೆಯನ್ನು ಖುದ್ದ ವೀಕ್ಷಿಸಿದ ಜಿಲ್ಲಾಧಿಕಾರಿಗಳು
ಬಂಟ್ವಾಳ: ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೆ ದುಸ್ತರವಾಗಿರುವ ರಾ.ಹೆ.ಯ ಕಲ್ಲಡ್ಕ ಮಳೆಗಾಲ ಮುಗಿಯವರೆಗೆ ತಾತ್ಕಾಲಿಕ ಮಟ್ಟಿಗಾದರೂ ಸರಿಪಡಿಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಅಧಿಕಾರೊಗಳಿಗೆ ಸಭೆಯಲ್ಲಿ ತಾಕೀತು ಮಾಡಿದ ಬೆನ್ನಲ್ಲೇ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಬುಧವಾರ ಕಲ್ಲಡ್ಕಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿಯ ಪರಿಶೀಲನೆ ನಡೆಸಿದರು.
ಈ ಸಂದರ್ಭ ಸ್ಥಳೀಯರು ಹೆದ್ದಾರಿ ಕಾಮಗಾರಿ ನಿರ್ಮಾಣ ಸಂದರ್ಭ ಆಗುತ್ತಿರುವ ತೊಂದರೆಗಳನ್ನು ವಿವರಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದರು.
ಮುಂಗಾರು ಆರಂಭಕ್ಕೆ ಮುನ್ನವೇ ಅಂದರೆ ಮಾಚ್೯ ತಿಂಗಳಲ್ಲೇ ನಾನು ಇಲ್ಲಿಗೆ ಭೇಟಿ ನೀಡಿದ ವೇಳೆ ಕೆಲ ಸೂಚನೆಗಳನ್ನು ಕೊಟ್ಟಿದ್ದೆ. ವಿಟ್ಲ ಸರ್ಕಲ್ ವರೆಗೆ ನೀರು ಹರಿದುಹೋಗುವ ಕೆಲಸಗಳನ್ನು ಮಾಡಲಾಗಿದೆ. ಜನರು ಮಾರ್ಗ ದಾಟಲು ಅನುಕೂಲವಾಗುವಂತೆ ಕ್ರಾಸಿಂಗ್ ಪಾಯಿಂಟ್ ಮಾಡುವ ಕುರಿತು ಸೂಚನೆ ನೀಡಲಾಗಿದೆ. ಮುಂಗಾರುಪೂರ್ವದಲ್ಲಿ ಇದನ್ನು ಮಾಡಬೇಕಾಗಿತ್ತು. ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಸೂಚನೆಯನ್ನು ನೀಡಿದ್ದೇನೆ ಎಂದು ಈ ಸಂದರ್ಭ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ನಿರ್ಮಾಣ, ಪಾದಾಚಾರಿಗಳು ದಾಟಲು ನಾಲ್ಕು ಕಡೆ ಕಾಲುದಾರಿ ನಿರ್ಮಾಣ, ತ್ಯಾಜ್ಯಗಳನ್ನು ತೆರವುಗೊಳಿಸುವುದು ಹಾಗೂ ಹೆದ್ದಾರಿ ಸಮತಟ್ಟುಗೊಳಿಸಲು ನಿರಂತರವಾಗಿ ವೆಟ್ ಮಿಕ್ಸ್ ಹಾಕಲು ಹೆದ್ದಾರಿ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್, ಟ್ರಾಫಿಕ್ ಎಸ್.ಐ.ಸುತೇಶ್, ಕೆ.ಎನ್‌ಆರ್.ಸಿ.ಕಂಪೆನಿಯ ಎಜಿಎಮ್ ರೋಹಿತ್ ರೆಡ್ಡಿ,ಕಂದಾಯ ನಿರೀಕ್ಷಕ ಜನಾರ್ದನ, ವಿಜಯ್ ಮತ್ತಿತರರು ಹಾಜರಿದ್ದು ಜಿಲ್ಲಾಧಿಕಾರಿಗೆ ಪೂರಕ ಮಾಹಿತಿ ನೀಡಿದರು.