
Ujire: ಸಿ.ಎಂ.ಎ(ಯು.ಎಸ್.ಎ) ಕೋರ್ಸ್ ಸಂಬಂಧ ಒಡಂಬಡಿಕೆ
ಉಜಿರೆ: ಎಸ್.ಡಿ.ಎಂ ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಮತ್ತು ಬೆಂಗಳೂರಿನ ಮೈಲಾಜಿಕ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಸ್ಕೂಲ್ ನಡುವೆ ಸಿ.ಎಂ.ಎ(ಯು.ಎಸ್.ಎ) ಕೋರ್ಸ್ ಸಂಬಂಧ 3 ವರ್ಷಗಳ ಒಡಂಬಡಿಕೆಗೆ ಸಹಿ ಮಾಡಲಾಗಿದೆ. ಮೈಲಾಜಿಕ್ ಸಂಸ್ಥೆಯ ಮುಖ್ಯಸ್ಥ ವಿನೋದ್ ಚಂದ್ರನ್ ಮತ್ತು ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ ಕುಮಾರ ಹೆಗ್ಡೆ ಒಡಂಬಡಿಕೆಗೆ ಸಹಿ ಮಾಡಿದರು. ಈ ವೇಳೆ ವಿಭಾಗದ ಮುಖ್ಯಸ್ಥೆ ಡಾ. ರತ್ನಾವತಿ ಕೆ ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.
ಕೇವಲ 1 ವರ್ಷದ ಕೋರ್ಸ್ ಇದಾಗಿದ್ದು, ಆನ್‌ಲೈನ್ ಹಾಗೂ ಆಫ್‌ಲೈನ್ ತರಗತಿಗಳ ವ್ಯವಸ್ಥೆ ಇದೆ. ಈ ಕೋರ್ಸ್ ಅಂತರಾಷ್ಟ್ರೀಯ ಮಟ್ಟದಲ್ಲಿ ಹಣಕಾಸು ನಿರ್ವಹಣೆ ಹಾಗು ಲೆಕ್ಕಶಾಸ್ತçದಲ್ಲಿ ಅರ್ಹತೆ ನೀಡುವ ಉದ್ದೇಶ ಹೊಂದಿದೆ. ಈ ಕೋರ್ಸ್ ಸಿ.ಎ ಹಾಗೂ ಸಿ. ಎಸ್ ಕೋರ್ಸ್ಗಳಂತೆ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಭಾರತ ಹಾಗು ವಿಶ್ವದೆಲ್ಲೆಡೆ ಸ್ಥಾಪಿತವಾಗಿರುವ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಆರ್ಥಿಕ ಸೇವೆ, ಸಲಹಾ ಸಂಸ್ಥೆಗಳು ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಕೆಲಸ ಮಾಡಲು ವಿಫುಲ ಅವಕಾಶ ನೀಡುತ್ತದೆ.
ಬಿ.ಕಾಂ. ಮುಗಿಸಿರುವ ಹಾಗೂ ಓದುತ್ತಿರುವ ವಿದ್ಯಾರ್ಥಿಗಳು ಈ ಕೋರ್ಸ್ ಆಯ್ದುಕೊಳ್ಳಬಹುದಾಗಿದೆ. ಎಸ್.ಡಿ.ಎಂ ಕಾಲೇಜಿನ 20 ವಿದ್ಯಾರ್ಥಿಗಳು ಈಗಾಗಲೇ ಈ ಸಂಸ್ಥೆಯಲ್ಲಿ ಕೋರ್ಸ್ ಅಭ್ಯಾಸ ಮಾಡುತ್ತಿದ್ದಾರೆ. ಇನ್ನೂ ಹೆಚ್ಚಿನ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಒಡಂಬಡಿಕೆಗೆ ಸಹಿ ಮಾಡಲಾಗಿದೆ.
ಈ ವೇಳೆ ಪ್ರಾಂಶುಪಾಲ ಡಾ. ಬಿ.ಎ ಕುಮಾರ ಹೆಗ್ಡೆ ಮಾತನಾಡಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿಗಳಿಗೆ ಈ ಕೋರ್ಸ್ ಬಹಳ ಪರಿಣಾಮಕಾರಿ ಹಾಗೂ ವಿವಿಧ ಉದ್ಯೋಗಾವಕಾಶಗಳನ್ನು ನೀಡುವಲ್ಲಿ ಪ್ರಯೋಜನವಾಗಲಿ ಎಂದು ಅಭಿಪ್ರಾಯಪಟ್ಟರು.