
Kasaragodu: ಕ್ವಾರಿ ಹೊಂಡದಲ್ಲಿ ಮುಳಗಿ ಅವಳಿ ಮಕ್ಕಳ ಸಾವು
Wednesday, June 19, 2024
ಕಾಸರಗೋಡು: ಇಲ್ಲಿನ ಚೀಮೇನಿಯ ಕಣಿಯಾಂತೋಳ್ ಎಂಬಲ್ಲಿ 11 ವರ್ಷದ ಅವಳಿ ಸಹೋದರರು ಕ್ವಾರಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ.
ಮೃತರನ್ನು ಚೀಮೇನಿಯ ರಾಧಾಕೃಷ್ಣನ್ ಮತ್ತು ಪುಷ್ಪಾ ದಂಪತಿಯ ಅವಳಿ ಮಕ್ಕಳಾದ ಸುದೇವ್ ಮತ್ತು ಶ್ರೀದೇವ್ ಎಂದು ಗುರುತಿಸಲಾಗಿದೆ. ಇಬ್ಬರೂ ಚೀಮೇನಿ ಹೈಯರ್ ಸೆಕೆಂಡರಿ ಶಾಲೆಯ ಐದನೇ ತರಗತಿ ವಿದ್ಯಾರ್ಥಿಗಳು. ಸೋಮವಾರ ಮಧ್ಯಾಹ್ನ ಮಕ್ಕಳು ಸೈಕಲ್ ಸಮೇತ ಹೊರಗೆ ಆಟವಾಡಲು ಮನೆಯಿಂದ ಹೊರಟಿದ್ದರು. ಸಂಜೆಯಾದರೂ ಇಬ್ಬರೂ ಮನೆಗೆ ಬಾರದೆ ಇದ್ದಾಗ ಅವರ ಪೋಷಕರು ಹುಡುಕಾಟ ಪ್ರಾರಂಭಿಸಿದ್ದಾರೆ. ಈ ವೇಳೆ ಮಕ್ಕಳ ಸೈಕಲ್ಗಳು ಕಲ್ಲು ಕ್ವಾರಿ ಬಳಿ ಪತ್ತೆಯಾಗಿದೆ ಮತ್ತು ಮಕ್ಕಳ ಶವಗಳು ಹತ್ತಿರದ ಕೊಳದಲ್ಲಿ ಮುಳುಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಣ್ಣೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.