Kundapura: ಚಾರುಕೊಟ್ಟಿಗೆಯಲ್ಲಿ ಚಿರತೆ-ಕಂಗಾಲಾದ ಜನತೆ
Friday, June 7, 2024
ಕುಂದಾಪುರ: ಕುಂದಾಪುರ ತಾಲೂಕಿನ ಚಾರುಕೊಟ್ಟಿಗೆ ಎಂಬಲ್ಲಿ ನಿರಂತರ ಜಾನುವಾರು, ನಾಯಿಗಳು ಮೇಲೆ ಚಿರತೆ ದಾಳಿಯಿಂದ ಜನರು ಕಂಗಾಲಾಗಿದ್ದಾರೆ.
ಇಲ್ಲಿನ ಮೀನು ವ್ಯಾಪಾರಿ ದಿನೇಶ್ ಮೊಗವೀರ ಬೆಳಿಗ್ಗೆ ಮೀನು ವ್ಯಾಪಾರಕ್ಕೆಂದು ಹೊರಡುವಾಗ ಮನೆಯ ಕೊಟ್ಟಿಗೆಯಲ್ಲಿ ಚಿರತೆ ದಾಳಿ ಮಾಡಿದ್ದರಿಂದ ಕರು ಒಮ್ಮೆಲೆ ಜೋರಾಗಿ ಕೂಗಿದೆ. ಕೂಡಲೇ ಪರಿಶೀಲಿಸಿದಾಗ ಚಿರತೆ ಕರುವಿನ ಮೇಲೆ ದಾಳಿ ಮಾಡಿರುವುದು ಪತ್ತೆಯಾಗಿದೆ. ಚಿರತೆ ಕರುವನ್ನು ಗಾಯಗೊಳಿಸಿ ಬಿಟ್ಟು ಹೋಗಿದೆ.
ಕುರುವಾಡಿ ಸೂರ ಪೂಜಾರಿ ಎಂಬುವವರ ಮನೆಯ ನಾಯಿಯನ್ನು ಹೊತ್ತುಕೊಂಡು ಹೋಗಿದೆ. ನಿನ್ನೆಯ ದಿನ ಕುರುವಾಡಿಯ ವಿಜಯ್ ಶೆಟ್ಟಿ ಅವರ ಮನೆಯ ಸಿಟೌಟ್ ನಿಂದ ನಾಯಿಯನ್ನು ಎತ್ತಿ ಕೊಂಡು ಹೋಗಿದೆ.
ಈ ಪ್ರದೇಶದಲ್ಲಿ ನಿರಂತರ ಚಿರತೆ ದಾಳಿಯಿಂದ ಕಂಗಾಲದ ಜನರು ಮನೆಯಿಂದ ಹೊರಗೆ ಹೋಗಲು ಹೆದರುತ್ತಿದ್ದಾರೆ. ರಕ್ಷಣೆಗಾಗಿ ಈ ಕುರಿತು ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ.