Kundapura: ಗೋ ಕಳ್ಳತನ ಸಹಿಸಲು ಸಾಧ್ಯವೇ ಇಲ್ಲ: ಶಾಸಕ ಗಂಟಿಹೊಳೆ
ಕುಂದಾಪುರ: ಬೈಂದೂರು ಪರಿಸರದಲ್ಲಿ ಇತ್ತೀಚೆಗೆ ಗೋವು ಕಳವು ಜಾಸ್ತಿಯಾಗಿದ್ದು, ಪೋಲೀಸರ ನಿಷ್ಕ್ರಿಯತೆ ಬಗ್ಗೆ ಶಾಸಕ ಗುರುರಾಜ ಗಂಟಿಹೊಳೆ ತೀವ್ರ ಅಸಾಮಾಧಾನಗೊಂಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಗೋವುಗಳ ಕಳ್ಳತನ, ಅಕ್ರಮ ಸಾಗಾಟ ಹೆಚ್ಚಳವಾಗಿದೆ. ಇತ್ತೀಚಿಗೆ ಶಿರೂರಿನ ಮುಖ್ಯಪೇಟೆಯ ಹೋಟೆಲ್ ಮುಂಭಾಗದಲ್ಲಿ ಮಲಗಿದ್ದ ಹಸುಗಳನ್ನು ರಾತ್ರಿ ವೇಳೆ ವಾಹನಕ್ಕೆ ತುಂಬಿಕೊಂಡು ಹೋಗುವುದು ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ತಡೆಯಲು ಬಂದವರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿರುವುದು ನಡೆದಿದೆ. ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಗೋ ಕಳ್ಳರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕರಾದ ಗುರುರಾಜ ಗಂಟಿಹೊಳೆ ಸೂಚಿಸಿದ್ದಾರೆ.
ಗೋಕಳ್ಳತನ ಹಾಗೂ ಗೋವುಗಳ ಅಕ್ರಮ ಸಾಗಾಟ ಸಹಿತ ಗೋವುಗಳ ಮೇಲಿನ ಹಲ್ಲೆ ಇತ್ಯಾದಿಗಳನ್ನು ಸಹಿಸಲು ಸಾಧ್ಯವೇ ಇಲ್ಲ. ಅಕ್ರಮ ಕೂಟ ಕಟ್ಟಿಕೊಂಡು ಗೋ ಕಳ್ಳತನ ಮಾಡುವವರ ಬಗ್ಗೆ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಕಠಿಣ ಕ್ರಮ ಆಗದೇ ಇದ್ದರೆ ಇಂತಹ ಪ್ರಕರಣ ಪದೇ ಪದೇ ಮರುಕಳಿಸುವ ಸಾಧ್ಯತೆಯೂ ಇದೆ. ಗೋ ಅಕ್ರಮ ಸಾಗಾಣಿಕೆ, ಗೋ ಕಳ್ಳ ಸಾಗಾಣಿಕೆಗೆ ಕ್ಷೇತ್ರದಲ್ಲಿ ಅವಕಾಶ ನೀಡಬಾರದು. ಕಾನೂನು ಸರಿಯಾದ ರೀತಿಯಲ್ಲಿ ಪಾಲನೆ ಆಗಬೇಕು ಎಂದರು.
ಗೋವುಗಳನ್ನು ರಕ್ಷಿಸುವುದು ನಮ್ಮೆಲ್ಲೆರ ಹೊಣೆ. ಗೋವುಗಳ ಅಕ್ರಮ ಸಾಗಾಟ ಬಂದ್ ಆಗಬೇಕು. ಇಲ್ಲವಾದರೇ ಕೆಲವೇ ದಿನಗಳಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಹಾಗೂ ವಿಧಾನ ಮಂಡಲ ಅಧಿವೇಶನದಲ್ಲಿಯೂ ಈ ವಿಚಾರ ಸರ್ಕಾರದ ಗಮನಕ್ಕೆ ತರಲಿದ್ದೇನೆ. ಅಧಿಕಾರಿಗಳು ಇನ್ನಷ್ಟು ಸಕ್ರಿಯವಾಗಬೇಕು. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳಬೇಕು ಎಂದಿದ್ದಾರೆ.