Mangalore: ಬಡವರ ಸಾಲ ಮನ್ನಾ ಮಾಡಿ-ಕಿರುಕುಳ ನೀಡುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಿ: ಬಿಕೆ ಇಮ್ತಿಯಾಜ್ ಆಗ್ರಹ
ಮಂಗಳೂರು: ಸ್ವಸಹಾಯ ಸಂಘಗಳಿಗೆ ಟ್ರಸ್ಟುಗಳ ಮೂಲಕ ನಡೆಯುವ ಹಣಕಾಸು ವ್ಯವಹಾರಗಳ ಬಗ್ಗೆ ತನಿಖೆ ಆಗಬೇಕು, ಸಾಲ ಪಡೆದವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸಿ ಬಡವರಿಗ ಸ್ವಸಹಾಯ ಸಂಘಗಳ ಮೂಲಕ ನೀಡಲಾಗಿರುವ ಸಾಲ ಮನ್ನಾ ಮಾಡಬೇಕೆಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಜ್ ಸರಕಾರವನ್ನು ಆಗ್ರಹಿಸಿದ್ದಾರೆ.
ಅವರು ಜೂ.8 ನಗರದ ನಾಸಿಕ್ ಬಂಗೇರಾ ಭವನದಲ್ಲಿ ಸ್ವಸಹಾಯ ಗುಂಪಿನ ಮತ್ತು ಮೈಕ್ರೋ ಸಾಲ ಸಂತ್ರಸ್ತರ ಮಂಗಳೂರು ತಾಲೂಕು ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದರು.
ಬಡವರ ಆದಾಯ ಮೂಲಗಳನ್ನು ಪರಿಶೀಲಿಸದೆ, ಸಾಲ ಮರುಪಾವತಿಯ ಮೂಲಗಳನ್ನು ಪರಿಶೋಧಿಸದೆ ಲಕ್ಷಾಂತರ ಸಾಲ ನೀಡಿರುವುದು ನಿಯಮ ಬಾಹಿರ ಕೆಲಸವನ್ನು ಸ್ವಸಹಾಯ ಸಂಘಗಳನ್ನು ನಿರ್ವಹಣೆ ಮಾಡುವ ಟ್ರಸ್ಟುಗಳು ಮಾಡುತ್ತಿವೆ ಎಂದು ಆರೋಪಿಸಿದ ಅವರು ಸಾಲ ವಸೂಲಿಯ ಹೆಸರಲ್ಲಿ ಬಡವರಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಜ್ಯ ಋಣಮುಕ್ತ ಹೋರಾಟ ಸಮಿತಿಯ ಅಧ್ಯಕ್ಷ ಬಿಎಂ ಭಟ್ ಅವರು, ನಬಾರ್ಡ್‌ನಿಂದ %3 ಬಡ್ಡಿಗೆ ತಂದ ಹಣವನ್ನು ಫ್ಲಾಟ್ ಬಡ್ದಿಗೆ ಬಡವರಿಗೆ ನೀಡಿ ಬಡವರ ರಕ್ತ ಹೀರಲಾಗುತ್ತಿದೆ ದೇವರು, ಕ್ಷೇತ್ರದ ಹೆಸರನ್ನು ಬಳಸಿಕೊಂಡು ಮುಗ್ಧ ಜನರನ್ನು ಭಾವನಾತ್ಮಕವಾಗಿ ಹೆದರಿಸಿ ಸಾಲ ಪಡೆದ ಬಡವರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು ಬಡವರಿಗೆ ಸಾಲ ವಸೂಲಾತಿಯ ಹೆಸರಲ್ಲಿ ದೌರ್ಜನ್ಯ ಎಸಗಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಋಣಮುಕ್ತ ಹೋರಾಟ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಯೋಗಿತಾ ಸುವರ್ಣ ಪ್ರಾಸ್ತಾವಿಕ ಭಾಷಣ ಮಾಡಿದರು. ರೇಷ್ಮಾ ಬೆಂಗ್ರೆ ಸ್ವಾಗತಿಸಿ, ನಾಸಿರ್ ಬಾಸ್ ವಂದಿಸಿದರು.