
Mangalore: ‘ಎಕ್ಸ್-ಸಂಗಮ್-2024’-ಶಿಸ್ತುಬದ್ಧ ಕಲಿಕಾ ಕ್ರಮವು ನನ್ನನ್ನು ಈ ಹಂತಕ್ಕೆ ತಲುಪಿಸಿತು: ಶ್ರೀದೇವಿ
ಮಂಗಳೂರು: ಪದವಿಪೂರ್ವ ಹಂತದ ಕಲಿಕಾಸಮಯದಲ್ಲಿ ಕಠಿಣ ಪರಿಶ್ರಮ ಮತ್ತು ಶಿಸ್ತುಬದ್ಧ ವಾತಾವರಣವು ಗುರಿಯೆಡೆ ಸಾಗುವಲ್ಲಿ ಸಹಾಯಕವಾಯಿತು ಎಂದು ಎಕ್ಸ್‌ಪರ್ಟ್ ಕಾಲೇಜಿನ ಹಳೆ ವಿದ್ಯಾರ್ಥಿ ಮತ್ತು ಇಸ್ರೋದ (ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ವಿಜ್ಞಾನಿ ಶ್ರೀದೇವಿ ಹೇಳಿದರು.
ಅವರು ಜೂ.24 ರಂದು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು, ಕೊಡಿಯಲ್ ಬೈಲ್‌ನ ಸಭಾಂಗಣ ‘ಎಕ್ಸ್‌ಪೋಡಿಯಂ’ ಅಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಮಹಾಸಭೆ ‘ಎಕ್ಸ್ ಸಂಗಮ್-2024’ಯಲ್ಲಿ ಭಾಗವಹಿಸಿ ಮಾತನಾಡಿದರು.
‘ಹಳೆ ವಿದ್ಯಾರ್ಥಿಗಳು ಕಾಲೇಜಿನಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ನಮ್ಮ ಸಾಧನೆ ಮುಂದಿನ ವಿದ್ಯಾರ್ಥಿಗಳಿಗೂ ಮಾದರಿಯಾಗಿರಬೇಕು. ಹಳೆ ವಿದ್ಯಾರ್ಥಿಗಳು ಈ ಸಂಘವನ್ನು ಇನ್ನಷ್ಟು ಬಲಪಡಿಸಬೇಕು. ಈಗಿನ ತಾಂತ್ರಿಕ ಯುಗದಲ್ಲಿ ಅದು ಕಷ್ಟಸಾಧ್ಯವಲ್ಲ ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ-ತಂತ್ರಜ್ಞಾನ ವಿಭಾಗದ ನಿರ್ದೇಶಕ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ಅಂಕುಶ್ ಎನ್. ನಾಯಕ್ ತಿಳಿಸಿದರು.
‘ಎಕ್ಸ್ ಸಂಗಮ್-2024’ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಮಚಂದ್ರ ಭಟ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಾಸ್ತವಿಕ ಮಾತುಗಳನ್ನಾಡಿದರು.
ಇದೇ ವೇಳೆ 2024ನೇ ಸಾಲಿನ ಹಳೆವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಹಳೆ ವಿದ್ಯಾರ್ಥಿಗಳ ಸಂಘದ ನೂತನ ಅಧ್ಯಕ್ಷರಾಗಿ ಡಾ. ಪೃಥ್ವಿ ಕಾಮತ್, ಉಪಾಧ್ಯಕ್ಷರಾಗಿ ವ್ರಜ್ ಕೆ. ರಾಬರ, ಕಾರ್ಯದರ್ಶಿಯಾಗಿ ಸಂಭ್ರಮ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಖುಷಿ ಪಿ. ಭಿಮಾನಿ ಆಯ್ಕೆಯಾದರು.
2023ನೇ ಸಾಲಿನ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಿಎ ಅಶ್ವತ್ ಶೆಣೈ, ಕಾರ್ಯಕ್ರಮದ ಸಂಯೋಜಕ, ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕ ದೀಪಕ್ ಪೋಥ್ನೀಸ್, ಹಿರಿಯ ಉಪನ್ಯಾಸಕರಾದ ಬಿ. ವಿನಯ್ ಕುಮಾರ್, ರಾಧಿಕಾ ಭಟ್ ಹಾಗೂ ಇತರ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.
ಸಿಎ ಅಶ್ವತ್ ಶೆಣೈ ಸ್ವಾಗತಿಸಿದರು. ಪ್ರೇರಣಾ ಬಿ. ಕಾರ್ಯಕ್ರಮ ನಿರೂಪಿಸಿ, ರೋನಲ್ ಫೆರ್ನಾಂಡೀಸ್ ವಂದಿಸಿದರು.