
Ujire: ಉಜಿರೆಯ ಮುಖ್ಯ ರಸ್ತೆಗೆ ಮರ ಬಿದ್ದು ವಾಹನಗಳು ಜಖಂ
Monday, June 24, 2024
ಉಜಿರೆ: ಉಜಿರೆ ಬಸ್ ನಿಲ್ದಾಣದ ಬಳಿಯ ಶ್ರೀ ದುರ್ಗಾ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಜೂ.24 ರಂದು ಮದ್ಯಾಹ್ನ 1.30ರ ವೇಳೆ ಏಕಾಏಕಿ ಬೃಹತ್ ಮರವೊಂದು ರಸ್ತೆಗುರುಳಿದ ಪರಿಣಾಮ ಉಜಿರೆಯಿಂದ ಬೆಳ್ತಂಗಡಿ ಕಡೆಗೆ ಸಂಚರಿಸತ್ತಿದ್ದ ಹಳೆಪೇಟೆಯ ಆಟೋರಿಕ್ಷಾದ ಮೇಲೆ ಬಿದ್ದು ಸವಾರ ರತ್ನಾಕರ (50) ಹಾಗೂ ಈರ್ವರು ಪ್ರಯಾಣಿಕರು ಗಂಭೀರ ಗಾಯಗೊಂಡು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಿರ್ಲಾಲಿನ ಹರೀಶ್ ಪೂಜಾರಿ ಎಂಬವರು ಅದೇ ಸಂದರ್ಭದಲ್ಲಿ ಕಾರು ನಿಲ್ಲಿಸಿ ಊಟಕ್ಕೆ ತೆರಳಿದ ವೇಳೆ ಮರ ಬಿದ್ದು ಕಾರಿನ ಮುಂಭಾಗ ಜಖಂ ಗೊಂಡಿದೆ.
ಚಾರ್ಮಾಡಿಯ ವಿಕ್ರಂ ಎಂಬವರ ಓಮ್ನಿ ವಾಹನ ಕೂಡ ಜಖಂಗೊಂಡಿದೆ. ಕೆಲ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಗ್ರಾಮ ಪಂಚಾಯತ್ ಮತ್ತು ಸ್ಥಳೀಯರು ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.
ಹೆದ್ದಾರಿ ದುರುಸ್ತಿ ಕಾರ್ಯ ನಡೆಯುತ್ತಿದ್ದು ಮರ ತೆರವುಗೊಳಿಸಲು ಅರಣ್ಯ ಇಲಾಖೆ ಅನುಮತಿ ನೀಡಿಲ್ಲವೆಂದು ಗುತ್ತಿಗೆದಾರರ ಕಾರ್ಮಿಕರು ಹೇಳಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ಜನಸೇರಿ ಗೊಂದಲ ನಿರ್ಮಾಣಗೊಂಡು ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.