
Mangalore: ವೆನ್ಲಾಕ್ ಲಯನ್ಸ್ ಲಿಂಬ್ ಸೆಂಟರ್ ನಿಂದ 84 ಸಾವಿರ ಕೃತಕ ಅಂಗಾಂಗ ವಿತರಣೆ: ಡಾ.ಶಾಂತಾರಾಮ ಶೆಟ್ಟಿ
ಮಂಗಳೂರು: ವೆನ್ಲಾಕ್ ಆಸ್ಪತ್ರೆಯ ಲಯನ್ಸ್ ಲಿಂಬ್ ಸೆಂಟರ್ ವತಿಯಿಂದ ಕಳೆದ 50 ವರ್ಷಗಳಲ್ಲಿ ಒಟ್ಟು 84 ಸಾವಿರ ಕೃತಕ ಕಾಲು ಸೇರಿದಂತೆ ಕೃತಕ ಅಂಗಾಂಗ ವಿತರಿಸಲಾಗಿದೆ. ಇದರಲ್ಲಿ ಶೇ.80 ಜನರಿಗೆ ವಿವಿಧ ಸಂಘಸಂಸ್ಥೆಗಳು, ದಾನಿಗಳ ನೆರವಿನಿಂದ ಪೂರ್ತಿ ಉಚಿತವಾಗಿ ಸೌಲಭ್ಯ ಒದಗಿಸಲಾಗಿದೆ ಎಂದು ಸೆಂಟರ್‌ನ ನಿರ್ದೇಶಕ, ಮೂಳೆ ತಜ್ಞ ಡಾ.ಶಾಂತಾರಾಮ ಶೆಟ್ಟಿ ತಿಳಿಸಿದರು.
ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.
ದೈಹಿಕ ಊನತೆ ಹೊಂದಿದವರು ಕಾಲು ಇಲ್ಲದವರಿಗೆ ಕೃತಕ ಕಾಲು ಒದಗಿಸಿ ಸ್ವಾವಲಂಬಿ ವ್ಯಕ್ತಿಯಾಗಿ ರೂಪಿಸುವುದು ಮತ್ತು ಅವರನ್ನು ಕುಟುಂಬ, ಸಮಾಜ ಮತ್ತು ದೇಶಕ್ಕೆ ಆಸ್ತಿಯಾಗಿ ಮಾರ್ಪಡಿಸುವುದು ಯೋಜನೆಯ ಉದ್ದೇಶ ಎಂದು ತಿಳಿಸಿದರು.
ವೆನ್ಲಾಕ್ ಕೇಂದ್ರದಲ್ಲಿ ಬಹುಪಯೋಗಿ ಅಪ್ಪರ್ ಲಿಂಬ್ (ಕೃತಕ ಕಾಲಿನ ತೊಡೆ ಸೇರಿ ದಂತೆ) ಅಂಗಾಂಗಗಳ ತಯಾರಿಕೆ ಮತ್ತು ಪೂರೈಕೆ ಮುಂದಿನ ಕನಸು. ಆದರೆ ಈ ಯೋಜನೆ ಅತ್ಯಂತ ದುಬಾರಿಯಾಗಿದ್ದು, ಪರಿಣಿತ ತಂತ್ರಜ್ಞರ ಕೊರತೆ ತುಂಬಾ ಇದೆ. ಪ್ರಸ್ತುತ, ಜೈಪುರ, ಮುಂಬೈ ಕೊಲ್ಕತ್ತ ಸಹಿತ ದೇಶದ ಸುಮಾರು ನಾಲ್ಕು ಕೇಂದ್ರಗಳಲ್ಲಿ ಮಾತ್ರ ಈ ಸೌಲಭ್ಯವಿದೆ. ಪ್ರಸ್ತುತ ಅತ್ಯಂತ ಕಡಿಮೆ ವೆಚ್ಚದಲ್ಲಿ ಅತ್ಯಾಧುನಿಕ ಹಾಗೂ ಬಹುಪಯೋಗಿ ಕೃತಕ ಕಾಲುಗಳನ್ನು ಲಯನ್ಸ್ ಲಿಂಬ್ ಸೆಂಟರ್ನಲ್ಲಿ ಉತ್ಪಾದಿಸಲಾಗುತ್ತಿದೆ. ಕೃತಕ ಕಾಲಿನ ಆವಶ್ಯಕತೆ ಇರುವ ಆರ್ಥಿಕವಾಗಿ ತುಂಬಾ ಕಷ್ಟದಲ್ಲಿ ಇರುವವರು ಕೇಂದ್ರವನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ನೆರವು..
ವರ್ಷದಲ್ಲಿ ಅರ್ಹ ಇಬ್ಬರು ವ್ಯಕ್ತಿಗಳಿಗೆ ಕೃತಕ ಕಾಲು ಒದಗಿಸಲು ಮಂಗಳೂರು ಪ್ರೆಸ್‌ಕ್ಲಬ್ ವತಿಂದ ನೆರವು ನೀಡಲಾಗುವುದು ಎಂದು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅವರು ಈ ಸಂದರ್ಭದಲ್ಲಿ ಪ್ರಕಟಿಸಿದರು.ದಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ವೆನ್ಲಾಕ್ ಆಸ್ಪತ್ರೆಯ ಲಯನ್ಸ್ ಲಿಂಬ್ ಸೆಂಟರ್ ಕೋಶಾಧಿಕಾರಿ ಡಾ.ಕೆ. ಆರ್.ಕಾಮತ್,ವ್ಯವಸ್ಥಾಪಕ ಸುರೇಶ್ ಶೆಟ್ಟಿ, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಉಪಸ್ಥಿತರಿದ್ದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರ್ವಹಿಸಿದರು.