
Udupi: ಹೊತ್ತಿ ಉರಿದ ಕಾರು-ಪ್ರಯಾಣಿಕರು ಪಾರು
Friday, June 28, 2024
ಉಡುಪಿ: ಮಣಿಪಾಲ ಎಂಐಟಿ ಸಮೀಪದ ಬಬ್ಬುಸ್ವಾಮಿ ದೈವಸ್ಥಾನದ ಬಳಿಯ ರಸ್ತೆ ಬದಿ ನಿಲ್ಲಿಸಿದ್ದ ಕಾರೊಂದು ಶುಕ್ರವಾರ ನಸುಕಿನ ವೇಳೆ 1.35ರ ಸುಮಾರಿಗೆ ಬೆಂಕಿ ಅಕಸ್ಮಿಕದಿಂದ ಹೊತ್ತಿ ಉರಿದಿದ್ದು, ಕಾರಿನಲ್ಲಿ ಮಲಗಿದ್ದ ಇಬ್ಬರು ಅಪಾಯದಿಂದ ಪಾರಾಗಿರುವ ಬಗ್ಗೆ ವರದಿಯಾಗಿದೆ.
ಬೈಂದೂರು ಕಿರಿಮಂಜೇಶ್ವರದ ಗಣೇಶ್ ಎಂಬವರು ಜೂ. 27ರಂದು ರಾತ್ರಿ ವೇಳೆ ರೋಗಿಯೊಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಕರೆತಂದಿದ್ದು, ಬಳಿಕ ಅವರು ಮತ್ತು ಅವರ ಗೆಳೆಯ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಮಲಗಿದ್ದರು. ಆ ವೇಳೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಎಚ್ಚರಗೊಂಡ ಅವರು ಹೊರಗೆ ಬಂದು ಅಪಾಯದಿಂದ ಪಾರಾದರು.
ಕಾರು ಸಂಪೂರ್ಣ ಸುಟ್ಟು ಹೋಗಿದ್ದು, ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 3 ಲಕ್ಷ ರೂ. ನಷ್ಟ ಸಂಭವಿಸಿದೆ.