
Udupi: ಬಸ್ ಚಾಲಕ ಅಸ್ವಸ್ಥಗೊಂಡರೂ ಸಮಯ ಪ್ರಜ್ಞೆ ಮೆರೆದ ಚಾಲಕ-ಪ್ರಯಾಣಿಕರು ಪಾರು
ಉಡುಪಿ: ಚಾಲಕ ಹಠಾತ್ ಅಸ್ವಸ್ಥಗೊಂಡರೂ ಸಮಯ ಪ್ರಜ್ಞೆ ಮೆರೆದು ಸಿಟಿ ಬಸ್ಸನ್ನು ಹಿಂದಕ್ಕೆ ಚಲಾಯಿಸಿ ಸುರಕ್ಷಿತವಾಗಿ ನಿಲ್ಲಿಸಿದ ಕಾರಣ ಬಸ್‌ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಗುರುವಾರ ಸಂಜೆ ಕೆಳ ಪರ್ಕಳದ ಕೆನರಾ ಬ್ಯಾಂಕಿನ ತಿರುವಿನಲ್ಲಿ ನಡೆದಿದೆ.
30ಕ್ಕೂ ಅಧಿಕ ಪ್ರಯಾಣಿಕರಿದ್ದ ಬಸ್, ರಸ್ತೆ ಪಕ್ಕದ ತೋಡಿಗೆ ತಾಗಿ ನಿಂತಿದೆ.
ಉಡುಪಿಯಿಂದ ಪರ್ಕಳದ ಹೆರ್ಗಕ್ಕೆ ತೆರಳುತಿದ್ದ ಸಿಟಿ ಬಸ್, ಕೆಳಪರ್ಕಳ ತಿರುವಿನ ಡಾಮರು ರಸ್ತೆಯ ಏರು ದಿನ್ನೆಯಲ್ಲಿ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿತು. ಆದರೂ ಆತ ಬಸ್ಸನ್ನು ಬಲಭಾಗಕ್ಕೆ ಚಲಾಯಿಸಿ ಮೋರಿ ಬಳಿ ನಿಲ್ಲಿಸಿದರು. ಹೀಗೆ ತಾನು ಅಪಾಯದಲ್ಲಿದ್ದರೂ ಸಮಯಪ್ರಜ್ಞೆಯಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿದ ಚಾಲಕನ ಕರ್ತವ್ಯಪ್ರಜ್ಞೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಬಸ್ಸು ಹಿಮ್ಮುಖವಾಗಿ ಚಲಿಸುತಿದ್ದಾಗ ಗಾಬರಿಗೊಂಡ ಕೆಲವು ಪ್ರಯಾಣಿಕರು ಬಸ್ಸಿನಿಂದ ಹೊರಕ್ಕೆ ಜಿಗಿದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಸ್ಸಿನ ಚಾಲಕನನ್ನು ಕೃಷ್ಣ ಎಂದು ಗುರುತಿಸಲಾಗಿದ್ದು, ಆತನನ್ನು ಬಸ್ಸಿನ ಹಿಂದಿನಿಂದ ಬರುತಿದ್ದ ಮಣಿಪಾಲ ಅಟೋ ಸ್ಟಾಂಡ್‌ನ ರಿಕ್ಷಾ ಚಾಲಕ ಅಬ್ದುಲ್ ರಶೀದ್ ತಮ್ಮ ಆಟೋದಲ್ಲಿ ಕರೆದೊಯ್ದು ಮಣಿಪಾಲ ಆಸ್ಪತ್ರೆಗೆ ಸೇರಿಸಿದರು.