Mangalore: ‘ಯಾವುದೇ ಜವಾಬ್ದಾರಿ ನೀಡಿದರೂ ನಿರ್ವಹಿಸುತ್ತೇನೆ’: ಎಂ.ಎಸ್. ಮುಹಮ್ಮದ್

Mangalore: ‘ಯಾವುದೇ ಜವಾಬ್ದಾರಿ ನೀಡಿದರೂ ನಿರ್ವಹಿಸುತ್ತೇನೆ’: ಎಂ.ಎಸ್. ಮುಹಮ್ಮದ್


ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟಿದ್ದು. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನೀಡಿದ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಯಾವುದೇ ಜವಾಬ್ದಾರಿ ಕೊಟ್ಟರೂ ನಿರ್ವಹಿಸುತ್ತೇನೆ. ಆದರೆ ಅದಕ್ಕಾಗಿ ಲಾಬಿ ಮಾಡುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರ ಪಕ್ಷದ ಜವಾಬ್ದಾರಿ ನಿರ್ವಹಣಾ ಉಸ್ತುವಾರಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮುಹಮ್ಮದ್ ತಿಳಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಬಗ್ಗೆ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರಗೊಂಡಿದ್ದ ವೇಳೆ ತಮ್ಮ ಹೆಸರು ಕೇಳಿ ಬಂದಿತ್ತಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಎಂಎಲ್‌ಎ, ಎಂಎಲ್‌ಸಿ ಆಗಬೇಕು ಎನ್ನುವ ಆಕಾಂಕ್ಷೆ ಪಕ್ಷದಲ್ಲಿ ದುಡಿಯ ಎಲ್ಲರಿಗೂ ಇರುತ್ತದೆ. ಅದಕ್ಕೆ ನಮ್ಮ ಹಣೆಯಲ್ಲೂ ಬರೆದಿರಬೇಕು. ಆದರೆ ನಮಗೆ ಆ ಸ್ಥಾನವನ್ನು ತಪ್ಪಿಸಲು ಈ ಹುದ್ದೆಯನ್ನು ನೀಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. 

ವಿಟ್ಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಹಿಡಿದು ವಿವಿಧ ಹುದ್ದೆಗಳನ್ನು ನಿರ್ವಹಿಸಿ ಜಿ.ಪಂ.ನ ಸದಸ್ಯನಾಗಿ ಮೂರು ಬಾರಿ ಆಯ್ಕೆಯಾಗಿ, ಜಿ.ಪಂ.ನ ಉಪಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುವ ಅವಕಾಶವೂ ನನಗೆ ದೊರಕಿದೆ. ಎಲ್ಲಾ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದು, ಹೈಕಮಾಂಡ್ ಈ ಕಾರ್ಯವನ್ನು ಗುರುತಿಸಿ ಈಗ ಐದು ಜಿಲ್ಲೆಗಳನ್ನು ಒಳಗೊಂಡ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನೀಡಿದ್ದು, ಇದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲಿದ್ದೇನೆ. ಮುಂಬರುವ ಜಿ.ಪಂ. ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಪಕ್ಷದ ಅಭ್ಯರ್ಥಿಗಳು ಗೆಲ್ಲುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು. 

ರಾಹುಲ್ ಗಾಂಧಿಗೆ ಲೋಕಸಭೆಯ ವಿಪಕ್ಷ ನಾಯಕ ಸ್ಥಾನ ನೀಡಿರುವ ಬಗ್ಗೆ ಅಭಿನಂದನೆ ಸಲ್ಲಿಸಿದ ಅವರು, ಹಲವು ಸಮಸ್ಯೆ, ಸವಾಲುಗಳ ಮೂಲಕ, ಹಲವು ರೀತಿಯ ಅವಮಾನಗಳನ್ನು ಸಮರ್ಥವಾಗಿ ಎದುರಿಸಿದ ರಾಹುಲ್ ಪಕ್ಷವನ್ನು ಮುನ್ನೆಡೆಸುವ ಸಮರ್ಥ ನಾಯಕ. ಪಾರ್ಲಿಮೆಂಟ್‌ನಿಂದ  ಅಮಾನತು ಮಾಡಿ, ಸರಕಾರಿ ಬಂಗಲೆಯಿಂದ ಹೊರ ಹಾಕಿ ಕೌನ್ ಹೇ ರಾಹುಲ್ ಎಂದು ಅವರನ್ನು ಪ್ರಧಾನಿ ಅವಮಾನಿಸಿದ್ದರು. ಆ ಎಲ್ಲಾ ಅವಮಾನ ಸಹಿಸಿಕೊಂಡು ಇದೀಗ ಛಾಯಾ ಪ್ರಧಾನಿಯಾಗಿ ಕ್ಯಾಬಿನೆಟ್ ಸ್ಥಾನಮಾನವನ್ನು ರಾಹುಲ್ ಪಡೆದಿದ್ದು, ಅವರ ಜತೆ ನಾವಿದ್ದೇವೆ ಎಂದರು. 

ಮುಖಂಡರಾದ ಟಿ. ಕೆ. ಸುಧೀರ್, ನೀರಜ್ ಪಾಲ್, ನಝೀರ್ ಬಜಾಲ್, ಸುಭಾಶ್ ಶೆಟ್ಟಿ, ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article