Mangalore: ವಿಕಲಾಂಗ ಚೇತನರು ಸ್ವಾವಲಂಬಿಗಳಾಗಲು ಫ್ರೋತ್ಸಾಹ ಅಗತ್ಯ: ಡಾ. ಎಂ. ಶಾಂತರಾಮ ಶೆಟ್ಟಿ
ಮಂಗಳೂರು: ವಿಕಲಾಂಗ ಚೇತನರು ಸ್ವಾವಲಂಬಿಗಳಾಗುವಂತಾಗಬೇಕು ಈ ನಿಟ್ಟಿನಲ್ಲಿ ಅವರಿಗೆ ಸಮಾಜದಿಂದ ಫ್ರೋತ್ಸಾಹ ದೊರೆಯಬೇಕು ಎಂದು ನಿಟ್ಟೆ ವಿಶ್ವ ವಿದ್ಯಾನಿಲಯದ ಸಹ ಕುಲಾಧಿಪತಿ ಹಾಗೂ ಖ್ಯಾತ ವೈದ್ಯ ಡಾ. ಎಂ. ಶಾಂತರಾಮ ಶೆಟ್ಟಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ವಿಶಿಷ್ಟ ಚೇತನರ ಸಂಘ, ಭಾರತೀಯ ರೆಡ್‌ಕ್ರಾಸ್ ದಕ್ಷಿಣ ಕನ್ನಡ ಶಾಖೆ, ಮಂಗಳೂರು ವಿಶ್ವವಿದ್ಯಾಲಯ ಯುವ ರೆಡ್‌ಕ್ರಾಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ರವಿವಾರ ಹಮ್ಮಿಕೊಂಡ ಸಂಘದ ೩೨ನೆ ವಾರ್ಷಿಕ ದಿನಾಚರಣೆ, ವೈದ್ಯಕೀಯ ನೆರವು ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ವಿಶಿಷ್ಟ ಚೇತನರು ಸಮಾಜದಲ್ಲಿ ತಮ್ಮ ಮಾನಸಿಕ ದೃಢತೆಯಿಂದ ಬದುಕಿದವರು ಅವರಿಗೆ ಸ್ಫೂರ್ತಿ ನೀಡುವ, ಅವರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು. ಅವರು ಇತರರಂತೆ ಸ್ವತಂತ್ರವಾಗಿ ಬದುಕಲು ಶಾಶ್ವತವಾದ ನೆರವು ನೀಡುವಲ್ಲಿ ಸಾಮೂಹಿಕವಾದ ಪ್ರಯತ್ನ ಆಗಬೇಕು. ಈ ನಿಟ್ಟಿನಲ್ಲಿ ಅವರದೇ ಆದ ಒಂದು ಸಂಘವನ್ನು ನಿರ್ಮಿಸಿಕೊಂಡು ತಮ್ಮಂತೆ ಇರುವವರಿಗೆ ಪರಸ್ಪರ ಸಹಾಯ ಮಾಡುವಲ್ಲಿ 32 ವರ್ಷಗಳ ಹಿಂದೆ ಸಂಘ ರಚಿಸಿರುವುದು ಶ್ಲಾಘನೀಯ. ಮೂರು ದಶಕಗಳ ಹಿಂದೆ ವೆನ್ಲಾಕ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಪ್ರಮಾಣ ಪತ್ರ ದಾಖಲೆ ಪಡೆಯಲು ವಿಶಿಷ್ಟ ಚೇತನರ ಬವಣೆಯನ್ನು ನಾನು ಗಮನಿಸಿ ವಿಕಾಲಾಂಗ, ವಿಶಿಷ್ಟ ಚೇತನರಿಗೆ ಒಂದು ಸಂಘಟನೆ ಅಗತ್ಯವಿದೆ ಎನ್ನುವ ಆಸೆ ಇಂದು ಸಂಸ್ಥೆ ಬೆಳೆದು ೩೨ನೆ ವಾರ್ಷಿಕ ಉತ್ಸವ ಆಚರಿಸುವ ಮೂಲಕ ಸಾರ್ಥಕಗೊಂಡಿದೆ ಈ ನಿಟ್ಟಿನಲ್ಲಿ ಸಮಾಜದ ಎಲ್ಲರ ಕೊಡುಗೆ ವಿಕಲಾಂಗ ಚೇತನರು ಸ್ವಾವಲಂಬಿಗಳಾಗಿ ಬದುಕಲು ನೆರವಾಗಬೇಕು ಎಂದು ಶಾಂತರಾಮ ಶೆಟ್ಟಿ ಶುಭ ಹಾರೈಸಿದರು.
ಭಾರತೀಯ ರೆಡ್‌ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಭಾಪತಿ ಸಿ.ಎ. ಶಾಂತರಾಮ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ವಿವಿಧ ಕಾರಣಗಳಿಂದ ವಿಕಲಾಂಗರಾಗುವ ಸಂದರ್ಭದಲ್ಲಿ ಅವರನ್ನು ಅವಲಂಬಿಸಿ ಕೊಂಡಿರುವವರು ಸಂಕಷ್ಟಕ್ಕೆ ಈಡಾಗುತ್ತಾರೆ. ಈ ಸಂದರ್ಭದಲ್ಲಿ ಅಂತವರಿಗೆ ಸಹಕಾರದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಘಟಿತರಾಗಿ ಪರಸ್ಪರ ಸಹಕಾರ ನೀಡುವ ನಿಟ್ಟಿನಲ್ಲಿ ವಿಶಿಷ್ಟ ಚೇತನರ ಸಂಘದ ಕೆಲಸ ಮಹತ್ವ ಪೂರ್ಣ ವಾಗಿದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ವೇದವ್ಯಾಸ ಕಾಮತ್ ಭಾಗವಹಿಸಿ ಮಾತನಾಡಿ, ದಿವ್ಯಾಂಗರಾದ ವ್ಯಕ್ತಿಗಳು ಸಮಾಜದ ಮುಖ್ಯವಾಹಿಗೆ ಬರಲು ಸಂಘದ ವತಿಯಿಂದ ನಡೆಯುತ್ತಿರುವುದು ಮತ್ತು ಅದಕ್ಕೆ ರೆಡ್‌ಕ್ರಾಸ್‌ನಂತಹ ಇತರ ಸಂಘಟನೆಗಳು ಬೆಂಬಲ ನೀಡುತ್ತಿರುವುದು ಶ್ಲಾಘನೀಯ. ಸಮಾಜದಲ್ಲಿ ವಿಕಲಚೇತನರು ತಮ್ಮ ಆತ್ಮ ಬಲದಿಂದ ಮಾಡುತ್ತಿರುವ ಸಾಧನೆ ಇತರರಿಗೆ ಸ್ಪೂರ್ತಿ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಗೌಡ, ವೆನ್ಲಾಕ್ ರೆಡ್‌ಕ್ರಾಸ್ ವಿಕಲಾಂಗ ಕೋಶದ ಅಧ್ಯಕ್ಷ ಡಾ. ಕೆ.ಆರ್., ಮಂಗಳೂರು ವಿಶ್ವ ವಿದ್ಯಾನಿಲಯದ ಯುವ ರೆಡ್‌ಕ್ರಾಸ್ ವಿಭಾಗದ ನೋಡಲ್ ಅಧಿಕಾರಿ ಡಾ. ಗಾಯತ್ರಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ವಿಶಿಷ್ಟ ಚೇತನರ ಸಂಘದ ಅಧ್ಯಕ್ಷ ಡಾ.ವಿ. ಮುರಳೀಧರ ಸ್ವಾಗತಿಸಿದರು.
ಪ್ರದಾನ ಕಾರ್ಯದರ್ಶಿ ಜಯಪ್ರಕಾಶ್ ಫಲಾನುಭವಿಗಳ ವಿವರ ನೀಡಿದರು. ಸಮಾರಂಭದಲ್ಲಿ ಅತಿಥಿಗಳು ವಿಕಲಾಂಗರಿಗೆ ನೆರವು, ವಿದ್ಯಾರ್ಥಿ ವೇತನ ಕಾರ್ಯಕ್ರಮ ನೆರವೇರಿಸಿದರು. ದಿನಮಣಿ ರಾವ್ ಕಾರ್ಯಕ್ರಮ ನಿರೂಪಿಸಿದರು. ನಾಗೇಶ್ ಶೆಟ್ಟಿ ವಂದಿಸಿದರು. ಇದೇ ಸಂದರ್ಭದಲ್ಲಿ ವಿಕಲಾಂಗ ಚೇತನರಿಗೆ ಉಚಿತ ಆರೋಗ್ಯ ತಪಾಸಣೆ ನಡೆಯಿತು.
