
Mangalore: ಶ್ರದ್ಧಾ ಭಕ್ತಿಯಿಂದ ಅಂಗಾರಕ ಸಂಕಷ್ಟಿ ವ್ರತಾಚರಣೆ
Tuesday, June 25, 2024
ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅಂಗಾರಕ ಸಂಕಷ್ಟಿ ವ್ರತಾಚರಣೆ ಮಂಗಳವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಮಂಗಳಾದೇವಿ ದೇವಸ್ಥಾನದಲ್ಲಿ ಮೂಡಪ್ಪ ಸೇವೆ, ಗಣಹೋಮ, ಸಂಕಷ್ಟಿ ಪೂಜೆ ನಡೆಯಿತು. ಅಪ್ಪ, ಎಳ್ಳಿನ ಉಂಡೆ, ಚಕ್ಕುಲಿ ಸಹಿತ ವಿಶೇಷ ಭಕ್ಷ್ಯಗಳನ್ನು ದೇವರಿಗೆ ಅರ್ಪಿಸಲಾಯಿತು.
ಶರವು ದೇವಸ್ಥಾನದಲ್ಲಿ ಮಹಾಗಣಯಾಗ ಸಹಿತ ಕಾರ್ಯಕ್ರಮಗಳು ನಡೆದವು. ಮಂಗಳಾದೇವಿ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರ, ಕದ್ರಿ ಮಂಜುನಾಥ ದೇವಸ್ಥಾನ, ಉರ್ವ ಮಹಾಗಣಪತಿ ದೇವಸ್ಥಾನ, ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನ, ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ ಸಹಿತ ಪ್ರಮುಖ ದೇವಳದಲ್ಲಿ ಅಂಗಾರಕ ಸಂಕಷ್ಟಹರ ಚತುರ್ಥಿ ಮಹೋತ್ಸವಕ್ಕೆ ಭಕ್ತ ಜನಸಾಗರವೇ ಸೇರಿತ್ತು. ಕ್ಷೇತ್ರಗಳ ಗಣಪತಿ ಸಾನ್ನಿಧ್ಯದಲ್ಲಿ ವಿಶೇಷ ಪೂಜೆಗಳು, ಗಣಹೋಮ ನಡೆಯಿತು.
ವ್ರತಾಚರಣೆ ಮಾಡುವವರು ಬೆಳಗ್ಗೆಯೇ ದೇವಸ್ಥಾನಕ್ಕೆ ತೆರಳಿ ದೇವರಿಗೆ ಗರಿಕೆ, ಹೂ-ಹಿಂಗಾರ ಸಮರ್ಪಿಸಿ ಅಪ್ಪದ ಪೂಜೆ, ಗಣಹೋಮ, ಪಂಚಕಜ್ಜಾಯ ಸಹಿತ ವಿವಿಧ ಸೇವೆಗಳನ್ನು ಸಮರ್ಪಿಸಿ ದೇವರ ದರ್ಶನ ಪಡೆದರು.