Mangalore: ಕನ್ನಡ ಭಾಷಾ ಬೋಧನಾವಧಿ - ನಿರ್ದೇಶನ ಪಾಲಿಸಲು ವಿಶ್ವವಿದ್ಯಾಲಯಗಳಿಗೆ ಶಿಕ್ಷಣ ಸಚಿವರ ಆದೇಶ

Mangalore: ಕನ್ನಡ ಭಾಷಾ ಬೋಧನಾವಧಿ - ನಿರ್ದೇಶನ ಪಾಲಿಸಲು ವಿಶ್ವವಿದ್ಯಾಲಯಗಳಿಗೆ ಶಿಕ್ಷಣ ಸಚಿವರ ಆದೇಶ

ಮಂಗಳೂರು: ಕನ್ನಡಕ್ಕೆ ಸಂಬಂಧಿಸಿದಂತೆ 4 ಗಂಟೆಗಳ ಪಾಠದ ಅವಧಿಯ ನಿರ್ದೇಶನವನ್ನು ಪಾಲಿಸುವಂತೆ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಸೂಚಿಸುವುದಾಗಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಭರವಸೆ  ನೀಡಿದ್ದಾರೆ. ಈ ಬಗ್ಗೆ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಪದವಿ ತರಗತಿಯ 3 ಕ್ರೆಡಿಟ್ ಗಳಿಗೆ ಇರುವ ಕನ್ನಡ ಭಾಷಾ ಬೋಧನಾವಧಿಯ ಕುರಿತು ಇರುವ ಗೊಂದಲದ ಬಗ್ಗೆ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರ ಸಂಘ ’ವಿಕಾಸ ’ದ ಅಧ್ಯಕ್ಷರಾದ ಡಾ. ನಾಗವೇಣಿ ಮಂಚಿ  ಕನ್ನಡ ಪ್ರಾಧಿಕಾರದ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಈಗಾಗಲೇ ಕೆಲವು ಕಾಲೇಜುಗಳಲ್ಲಿ ಬೋಧನಾವಧಿಯನ್ನು ಕಡಿತ ಮಾಡಲಾಗಿದ್ದು, ಇದರಿಂದ ಆಗಬಹುದಾದ ಸಾಂಸ್ಕೃತಿಕ, ತಾಂತ್ರಿಕ ಸಮಸ್ಯೆಗಳನ್ನು ಅಧ್ಯಕ್ಷರ ಗಮನಕ್ಕೆ ತಂದಿದ್ದರು  ಹಾಗೂ ವಿವರವಾದ ಟಿಪ್ಪಣಿಯನ್ನು ಒಳಗೊಂಡ ಮನವಿಯನ್ನು ಸಲ್ಲಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಉನ್ನತ ಶಿಕ್ಷಣದ ಸಚಿವರಾದ ಡಾ. ಸುಧಾಕರ್ ಅವರನ್ನು ಭೇಟಿಯಾಗಿ ಸಮಸ್ಯೆಯನ್ನು ವಿವರಿಸಿದ್ದರು. ಉನ್ನತ ಶಿಕ್ಷಣ ಸಚಿವರು ಇದಕ್ಕೆ ತಕ್ಷಣವೇ  ಸ್ಪಂದಿಸಿ ಕನ್ನಡ ಭಾಷಾ ಕಲಿಕಾ ಅವಧಿಯನ್ನು ಮೊದಲಿನಂತೆ ನಾಲ್ಕು ಗಂಟೆಗೆ ನಿಗದಿ ಮಾಡಿ  ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಆದೇಶ ಕಳುಹಿಸಿದ್ದಾರೆ.

ಬೋಧನಾವಧಿ ಕಡಿತದಿಂದಾಗಿ ಭಾಷೆ , ಸಂಸ್ಕೃತಿ ಹಾಗು ಉದ್ಯೋಗಾವಕಾಶಗಳಿಗೆ ಹೊಡೆತ ಬೀಳುವ ಸಂಭವನೀಯ ಅಪಾಯವನ್ನು ಮನಗಂಡು  ತಕ್ಷಣವೇ ಕಾರ್ಯಪ್ರವೃತ್ತರಾದ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ.ಸುಧಾಕರ್ ಮತ್ತು ಈ ಸಮಸ್ಯೆಯ ಆಳ ಅಗಲಗಳನ್ನು ಅರಿತು ಸಚಿವರಿಗೆ ಮನವರಿಕೆ ಮಾಡಿಕೊಟ್ಟ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರಿಗೆ “ವಿಕಾಸ” ಕೃತಜ್ಞತೆಗಳನ್ನು ಸಲ್ಲಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article