Mangalore: ಇಂಧನ ಬೆಲೆ ಏರಿಕೆ-ಮಾನವ ಸರಪಳಿ, ರಸ್ತೆ ತಡೆದು ಪ್ರತಿಭಟನೆ

Mangalore: ಇಂಧನ ಬೆಲೆ ಏರಿಕೆ-ಮಾನವ ಸರಪಳಿ, ರಸ್ತೆ ತಡೆದು ಪ್ರತಿಭಟನೆ


ಮಂಗಳೂರು: ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಮಂಗಳೂರು ನಗರದ ಪಿವಿಎಸ್ ವೃತ್ತದಲ್ಲಿ ಗುರುವಾರ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮಂಗಳೂರು ದಕ್ಷಿಣ ಮಂಡಲ ವತಿಯಿಂದ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ನಡೆದ ರಸ್ತೆತಡೆ ಪ್ರತಿಭಟನೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ಸದಸ್ಯರಾದ ಪೂರ್ಣಿಮಾ, ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಮಾಜಿ ಎಂಎಲ್ಸಿ ಮೋನಪ್ಪ ಭಂಡಾರಿ, ಮುಖಂಡರಾದ ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ವಿಜಯ ಕುಮಾರ್ ಶೆಟ್ಟಿ, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪಿವಿಎಸ್ ವೃತ್ತಕ್ಕೆ ಆಗಮಿಸಿದ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿದರು. ಸುಮಾರು 20 ನಿಮಿಷ ಕಾಲ ರಸ್ತೆತಡೆ ನಡೆಸಿದರು. ಬಳಿಕ ಪೊಲೀಸರು ರಸ್ತೆತಡೆ ತೆರವುಗೊಳಿಸಲು ವಿನಂತಿಸಿದ್ದಾರೆ. ಕಾರ್ಯಕರ್ತರು ಅದಕ್ಕೆ ಒಪ್ಪದಾಗ ಪೊಲೀಸರು ವಶಕ್ಕೆ ಪಡೆಯಲು ಮುಂದಾದರು. ಆಗ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಕೊನೆಗೆ ಪೊಲೀಸರು ಒಬ್ಬೊಬ್ಬರನ್ನೇ ಎತ್ತಿ ಬಸ್ಗೆ ತುಂಬಿಸಿದರು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಕಾರ್ಯಕರ್ತರು ಮತ್ತಷ್ಟು ಘೋಷಣೆ ಕೂಗಿದರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಬಿಜೆಪಿಯ ರಸ್ತೆತಡೆ ವಿರುದ್ಧ ಲಾಠಿ ಚಾರ್ಜ್ ನಡೆಸುವಂತೆ ಗೃಹ ಸಚಿವರು ಪೊಲೀಸರಿಗೆ ಸೂಚಿಸಿದ್ದಾರೆ. ಲಾಠಿ ಎತ್ತಿದರೆ ಲಾಠಿಗೆ ಉತ್ತರಿಸುವ ತಾಕತ್ತು ಬಿಜೆಪಿ ಕಾರ್ಯಕರ್ತರಲ್ಲಿ ಇದೆ ಎಂದರು.

ಇಂಧನ ಬೆಲೆ ಏರಿಕೆ ಬೆನ್ನಲ್ಲೇ ದಿನಬಳಕೆ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದೆ. ಖಜಾನೆಯಲ್ಲಿ ಹಣ ಇದೆ ಎನ್ನುವ ಸಿದ್ದರಾಮಯ್ಯ ಸರ್ಕಾರ ಯಾಕಾಗಿ ಇಂಧನ ಬೆಲೆ ಏರಿಕೆ ಮಾಡಿದೆ? ಗ್ಯಾರಂಟಿ ಯೋಜನೆಗಳ ಹಣ ಹೊಂದಿಸಲು ಜನಸಾಮಾನ್ಯರಿಗೆ ಬರೆ ಹಾಕುತ್ತಿದ್ದಾರೆ. ಸರ್ಕಾರ ಇಂಧನ ಮೇಲಿನ ತೆರಿಗೆ ತೆಗೆದುಹಾಕಬೇಕು. ಇಂಧನ ಬೆಲೆ ಇಳಿಸುವ ವರೆಗೂ ಹೋರಾಟ ಮುಂದುವರಿಯಲಿದೆ ಎಂದರು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಪಕ್ಷದ ರಾಜ್ಯಾಕ್ಷರ ಕರೆಯಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಈ ಹೋರಾಟ ನಡೆಸಲಾಗುತ್ತದೆ. ಇಂಧನ ಬೆಲೆ ಇಳಿಸುವ ವರೆಗೂ ಜನಾಂದೋಲನವಾಗಿ ಈ ಹೋರಾಟ ರೂಪುಗೊಳ್ಳಲಿದೆ. ಮೋದಿಯನ್ನು ಜನತೆ ಬೆಂಬಲಿಸಿದ್ದಾರೆ ಎಂಬ ಕಾರಣಕ್ಕೆ ದರ ಏರಿಕೆ ಮಾಡುವ ಮೂಲಕ ಜನತೆಗೆ ಶಾಸ್ತಿ ಮಾಡಲು ಕಾಂಗ್ರೆಸ್ ಹೊರಟಿದೆ. ಮುಂಬರುವ ಅಧಿವೇಶನದಲ್ಲಿ ಶಾಸಕರು ಸದನದಲ್ಲಿ ಹೋರಾಟ ನಡೆಸಲಿದ್ದಾರೆ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article