Mangalore: ಮಂಗಳಮುಖಿಯರ ವೇಷದಲ್ಲಿ ಭಿಕ್ಷಾಟನೆ: ಆಕ್ರೋಶ
ಮಂಗಳೂರು: ನಗರದಲ್ಲಿ ಬಹುತೇಕ ಗಂಡಸರು ಮಂಗಳಮುಖಿಯರಂತೆ ವೇಷ ಧರಿಸಿ ಭಿಕ್ಷಾಟನೆ ಮತ್ತು ದರೋಡೆಯಲ್ಲಿ ತೊಡಗಿದ್ದಾರೆ. ಇದರಿಂದಾಗಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ತೊಂದರೆಯಾಗುತ್ತಿದೆ. ಇಂತಹವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನವಸಹಜ ಸಮುದಾಯ ಸಂಘಟನೆ ಆಗ್ರಹಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತಂತೆ ಮಾತನಾಡಿದ ಸಂಘಟನೆಯ ಅಧ್ಯಕ್ಷೆ ನಿಖಿಲಾ, ಕುಟುಂಬ ಸಂಸಾರವಿರುವ ಗಂಡಸರು ಮಂಗಳಮುಖಿಯರಂತೆ ವೇಷ ಧರಿಸಿ ಭಿಕ್ಷಾಟನೆ ನಡೆಸುವುದು ತಪ್ಪಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯ ಹಾಗೂ ಜಿಲ್ಲೆಯ ಕೆಲವು ಜನರು ಹಣಕ್ಕಾಗಿ ಮಂಗಳಮುಖಿಯರಂತೆ ಸೀರೆ ಉಟ್ಟುಕೊಂಡು ರಾತ್ರಿ ಮತ್ತು ಹಗಲು ಸಾರ್ವಜನಿಕರಿಂದ ದರೋಡೆ ಮಾಡುತ್ತಿದ್ದಾರೆ. ಮಂಗಳೂರಿನ ಸ್ಟೇಟ್‌ಬ್ಯಾಂಕ್, ಸಿಟಿ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಪೊಲೀಸ್ ಇಲಾಖೆಗೆ ಹಲವು ಬಾರಿ ತಿಳಿಸಿದ್ದರೂ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ, ಸಾರ್ವಜನಿಕರಿಗೆ ತೊಂದರೆ ನೀಡಿದರೆ ಕಾನೂನು ಕ್ರಮ ಕೈಗೊಳ್ಳಬೇಕು. ನಿಜವಾದ ಮಂಗಳಮುಖಿಯಾದವರಲ್ಲಿ ಜಿಲ್ಲಾಡಳಿತ ನೀಡಿದ ಟಿ.ಡಿ. ಐಡಿ ಕಾರ್ಡ್ ಇರುತ್ತೆ, ಕಾರ್ಡ್ ಇಲ್ಲದವರು ಮಂಗಳಮುಖಿಯರಲ್ಲ ಎಂದರು.
ಸಂಘದ ಕಾರ್ಯದರ್ಶಿ ಅರುಂಧತಿ ಮಾತನಾಡಿ, ಮಂಗಳಮುಖಿಯರಲ್ಲದವರು ಮಾಡಿದ ಅನ್ಯಾಯದಿಂದಾಗಿ ನಮಗೆ ಬಾಡಿಗೆ ಮನೆ ಪಡೆಯುವುದಕ್ಕೂ ಕಷ್ಟವಾಗುತ್ತಿದೆ. ಇನ್ನು ಮಂಗಳಮುಖಿಯರ ಶಿಕ್ಷಣ, ವಸತಿ ಸೌಲಭ್ಯ ನೀಡಲು ಸರ್ಕಾರ ಮುಂದಾಗಬೇಕು ಎಂದರು.
ಸಂಘಟನೆಯ ಪ್ರಮುಖರಾದ ಹನಿ, ಪ್ರೇಮ, ಖುಷಿ ಉಪಸ್ಥಿತರಿದ್ದರು.