
Mangalore: ಬಿಜೆಪಿ ವಿಜಯೋತ್ಸವ ಆಚರಣೆ ಸಂದರ್ಭ ಚೂರಿ ಇರಿತ ಪ್ರಕರಣ-ಐವರ ಸೆರೆ
ಮಂಗಳೂರು: ಮುಡಿಪು ಸಮೀಪದ ಬೋಳಿಯಾರು ಬಳಿ ರವಿವಾರ ರಾತ್ರಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಕೊಣಾಜೆ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಶಾಕೀರ್ (28), ಅಬ್ದುಲ್ ರಜಾಜ್ (40), ಅಬೂಬಕ್ಕರ್ ಸಿದ್ದಿಕಿ (35), ಸವಾದ್ (18), ಮೋನು ಯಾನೆ ಹಪೀಜ್ (24) ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಿಸಿ ಟಿವಿ ಫೂಟೇಜ್ ನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಕೇಂದ್ರದಲ್ಲಿ ಎನ್.ಡಿ.ಎ. ಸರಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ರವಿವಾರ ರಾತ್ರಿ ಬೋಳಿಯಾರ್ ನಲ್ಲಿ ವಿಜಯೋತ್ಸವ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಯ ಬಳಿಕ ಬೋಳಿಯಾರ್ ಬಾರ್ ಮುಂಭಾಗದಲ್ಲಿ ಮುಸ್ಲಿಮರ ತಂಡವೊಂದು ಮೂವರು ಬಿಜೆಪಿ ಕಾರ್ಯಕರ್ತರನ್ನು ಅಡ್ಡಗಟ್ಟಿ ಚೂರಿಯಿಂದ ಇರಿದು ಪರಾರಿಯಾಗಿದೆ ಎನ್ನಲಾಗಿದೆ. ಹಲ್ಲೆಗೊಳಗಾದ ಹರೀಶ್ ನಂದಕುಮಾರ್ ಹಾಗೂ ಕೃಷ್ಣ ಕುಮಾರ್ ಎಂಬವರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಕೊಣಾಜೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರ ಬೇಜವಾಬ್ದಾರಿ ವರ್ತನೆಯನ್ನು ಪ್ರಶ್ನಿಸಿ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರು ಭಾನುವಾರ ತಡರಾತ್ರಿ ಕೊಣಾಜೆ ಪೊಲೀಸ್ ಠಾಣೆಗೆ ಘೇರಾವ್ ಹಾಕಿದ್ದಾರೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಬೋಳಿಯಾರ್ ಗ್ರಾಮ ಸಮಿತಿಯು ಬೋಳಿಯಾರುದಿಂದ ಧರ್ಮನಗರದವರೆಗೆ ವಿಜಯೋತ್ಸವವನ್ನು ಆಯೋಜಿಸಿತ್ತು. ಮೆರವಣಿಗೆ ವೇಳೆ ಮಸೀದಿ ಬಳಿ ಡಿಜೆ ಮ್ಯೂಸಿಕ್ ನುಡಿಸದಂತೆ ಮೆರವಣಿಗೆಯಲ್ಲಿದ್ದವರಿಗೆ ಗ್ಯಾಂಗ್ ಸೂಚನೆ ನೀಡಿತ್ತು. ಈ ವೇಳೆ ಮಾತಿನ ಚಕಮಕಿ ಹಲ್ಲೆ ನಡೆದಿದೆ.