Mangalore: ಕಲ್ಲಡ್ಕ ರಾಷ್ಟ್ರೀಯ ಹೆದ್ಧಾರಿಯನ್ನು ಒಂದು ವಾರದೊಳಗೆ ದುರಸ್ತಿ ಪೂರ್ಣಗೊಳಿಸಲು ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ  ಸೂಚನೆ

Mangalore: ಕಲ್ಲಡ್ಕ ರಾಷ್ಟ್ರೀಯ ಹೆದ್ಧಾರಿಯನ್ನು ಒಂದು ವಾರದೊಳಗೆ ದುರಸ್ತಿ ಪೂರ್ಣಗೊಳಿಸಲು ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಸೂಚನೆ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾದುಹೋಗಿರುವ ಎಲ್ಲಾ ರಾಷ್ಟ್ರೀಯ ಹೆದ್ಧಾರಿಗಳನ್ನು ಸಮರ್ಪಕ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅನುಕೂಲಕರವಾಗಿ ಮಾಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್  ಹೆದ್ದಾರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಳೆಗಾಲದಲ್ಲಿ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದರು.

ಬಿಸಿ.ರೋಡ್-ಕಲ್ಲಡ್ಕ-ಮಾಣಿ ರಾಷ್ಟ್ರೀಯ ಹೆದ್ಧಾರಿಯಲ್ಲಿ ದುರಸ್ತಿಯನ್ನು ಒಂದು ವಾರದೊಳಗೆ ಪೂರ್ಣಗೊಳಿಸಬೇಕು, ಮಳೆಯ ನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದ ಅವರು ವಾಹನಗಳು ಸುಗಮವಾಗಿ ಸಂಚರಿಸಲು ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು, ಮಳೆಯಿಂದ ಕಾಮಗಾರಿ ಮತ್ತೆ ಹಾನಿ ಆದರೆ ಮತ್ತೆ ದುರಸ್ತಿ ಮಾಡಬೇಕು. ಮಳೆಗಾಲ ಪೂರ್ಣಗೊಳ್ಳುವವರೆಗೂ ಈ ಹೆದ್ದಾರಿ ಮೇಲೆ ನಿಗಾ ವಹಿಸಬೇಕು ಎಂದು ಸೂಚಿಸಿದರು.

ಮಳೆಗಾಲ ಆಗಮನದ ಮಾಹಿತಿ ಇದ್ದರೂ ಕಲ್ಲಡ್ಕ ಹೆದ್ದಾರಿಯಲ್ಲಿ ಚರಂಡಿ ನಿರ್ಮಾಣಕ್ಕೆ ವಿಳಂಬಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವ ದಿನೇಶ್ ಗುಂಡರಾವ್ ಆದ್ಯತೆಯಲ್ಲಿ ಕಾಮಗಾರಿ ನಡೆಸಲು ಸೂಚಿಸಿದರು.

ವಿಷಯ ಪ್ರಸ್ತಾಪಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕಲ್ಲಡ್ಕ ಪೇಟೆಯ ರಾಷ್ಟ್ರೀಯ ಹೆದ್ಧಾರಿಯಲ್ಲಿ ಸಂಚಾರ ತೀವ್ರ ದುಸ್ತರವಾಗಿದ್ದು ಸಾರ್ವಜನಿಕರು ಪ್ರತಿಕ್ಷಣವೂ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ, ಇದರಿಂದ ಮಾಣಿ-ಬಿಸಿ.ರೋಡ್ ಮಧ್ಯ ಸಂಚಾರವು ತೀವ್ರ ದುಸ್ತರವಾಗಿದ್ದು ಸಾರ್ವಜನಿಕರು ಬೇರೆ ದೂರದ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು.

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ ಪುಂಜಾಲಕಟ್ಟೆ-ಚಾರ್ಮಾಡಿ ಹೆದ್ದಾರಿ ವಿಸ್ತರಣೆಗೆ ಕಾಮಗಾರಿ ನಡೆಯುತ್ತಿದ್ದು ಮಳೆಗಾಲದಲ್ಲಿ ಸುಗಮ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ ಎಂದು ತಿಳಿಸಿದರು. ಸಚಿವರು ಮಾತನಾಡಿ ಈ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದರೂ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮ ವಹಿಸಲು ಸೂಚಿಸಿದರು.

ಕೂಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಅಡಿಪಾತ್ರದಲ್ಲಿ ಹಾಕಿರುವ ಮಣ್ಣಿನಿಂದ ಮಳೆಗಾಲದಲ್ಲಿ ನದಿ ನೀರಿನ ಸುಗಮ ಹರಿವಿಗೆ ಅಡ್ಡಿಯಾಗಿ ಹಾಲಿ ಸೇತುವೆಗೆ ಅಪಾಯ ಸಾಧ್ಯತೆ ಇರುವುದರಿಂದ ಈ ಮಣ್ಣನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ತಿಳಿಸಿದರು. 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ನವೀನ್ ಮಾತನಾಡಿ, ಈಗಾಗಲೇ ಕೂಳೂರು ಸೇತುವೆ ಮಣ್ಣನ್ನು ತೆರವುಗೊಳಿಸಲು ಕಾಮಗಾರಿ ನಡೆಯುತ್ತಿದೆ. ಕಲ್ಲಡ್ಕ ಹೆದ್ದಾರಿಯಲ್ಲಿ ರಸ್ತೆಯನ್ನು ಸುಸ್ಥಿತಿಯಲ್ಲಿಡಲು ಆದ್ಯತೆಯಲ್ಲಿ ಕೆಲಸ ನಡೆಯುತ್ತಿದೆ ಎಂದು ಎಂದು ತಿಳಿಸಿದರು.

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಮತಗಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ, ಪೊಲೀಸ್ ಆಯುಕ್ತರು ಅನುಪಮ ಅಗ್ರವಾಲ್, ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿಬಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article