
Mangalore: ಸ್ಮಾರ್ಟ್‌ಸಿಟಿ ಕಳಪೆ ಕಾಮಗಾರಿ-ತಡೆಗೋಡೆ ಕುಸಿತ
ಮಂಗಳೂರು: ಮಂಗಳೂರು ಸ್ಮಾರ್ಟ್‌ಸಿಟಿ ವತಿಯಿಂದ ಉದ್ದೇಶಿತ ವಾಟರ್ ಫ್ರಂಟ್ ಯೋಜನೆಗಾಗಿ ಬೋಳಾರದ ಮುಳಿಹಿತ್ಲುವಿನಲ್ಲಿ ನೇತ್ರಾವತಿ ನದಿಗೆ ರಚಿಸಲಾದ ರಕ್ಷಣಾತ್ಮಕ ತಡೆಗೋಡೆ ಕುಸಿತಗೊಂಡಿದೆ.
ಪ್ರವಾಸೋದ್ಯಮ ಅಭಿವೃದ್ಧಿ ದಿಶೆಯಲ್ಲಿ ಬಹುನಿರೀಕ್ಷಿತ ವಾಟರ್ ಫ್ರಂಟ್ ಯೋಜನೆಯನ್ನು ಸುಮಾರು 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರ ಪ್ರಥಮ ಹಂತದಲ್ಲಿ 15.24 ಕೋಟಿ ರು. ವೆಚ್ಚದಲ್ಲಿ ತಡೆಗೋಡೆ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ. ಮುಳಿಹಿತ್ಲು ದಕ್ಷಿಣದಿಂದ ಬೋಳಾರ ವರೆಗೆ ನದಿ ಕಿನಾರೆಯಲ್ಲಿ ಕಲ್ಲು, ಸಿಮೆಂಟ್ ಬಳಸಿ ತಡೆಗೋಡೆ ಕೂಡ ರಚಿಸಲಾಗಿದೆ. ಸುಮಾರು 400 ಮೀಟರ್‌ನಷ್ಟು ಈ ತಡೆಗೋಡೆ ಇತ್ತೀಚೆಗೆ ಸುರಿದ ಮಳೆಯಿಂದ ಜರಿದು ನದಿ ಪಾಲಾಗಿದೆ. ಹೀಗಾಗಿ ಸ್ಮಾರ್ಟ್‌ಸಿಟಿ ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪ ನಾಗರಿಕರಿಂದ ವ್ಯಕ್ತವಾಗತೊಡಗಿದೆ.
ವಾಟರ್ ಫ್ರಂಟ್ ಯೋಜನೆಗೆ ರಾಷ್ಟ್ರೀಯ ಹಸಿರು ನ್ಯಾಯಪೀಠ ತಡೆಯಾಜ್ಞೆ ನೀಡಿ, ಈ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿತ್ತು. ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ತಡೆಗೋಡೆ ಕುಸಿತಗೊಂಡಿದ್ದು ಕಾಮಗಾರಿಯ ಗುಣಮಟ್ಟ ಬಗ್ಗೆ ಸಂಶಯ ಮೂಡುವಂತೆ ಮಾಡಿದೆ.
ಮಳೆ ನೀರು ನಿಂತಿರುವುದು ತಡೆಗೋಡೆ ಕುಸಿತಕ್ಕೆ ಕಾರಣವಾಗಿದೆ. ನೀರು ಒಂದೇ ಕಡೆ ಶೇಖರಣೆಗೊಂಡು ಈ ಸಮಸ್ಯೆ ಉದ್ಭವಿಸಿದೆ. ಕಾಮಗಾರಿಯ ಗುತ್ತಿಗೆದಾರರು ತಡೆಗೋಡೆ ಪುನರ್ ರಚಿಸಿಕೊಡಲಿದ್ದಾರೆ ಎಂದು ಸ್ಮಾರ್ಟ್‌ಸಿಟಿ ಅಧಿಕಾರಿಗಳು ಸಮಜಾಯಿಸಿ ನೀಡಿದ್ದಾರೆ.