
Mangalore: ವಿ.ವಿ. ಕಾಲೇಜು ಉಳಿಸಲು ಹೋರಾಟ ಸಮಿತಿ ರಚನೆ
ಮಂಗಳೂರು: ಕೊಣಾಜೆಯಲ್ಲಿರುವ ಮಂಗಳೂರು ವಿವಿ ಕ್ಯಾಂಪಸ್ ಒಳಗಡೆ ಇರುವ ಪದವಿ ಕಾಲೇಜು ಸಹಿತ ಆರ್ಥಿಕ ಮುಗ್ಗಟ್ಟಿನಿಂದ ಮುಚ್ಚುವ ಭೀತಿ ಎದುರಿಸುತ್ತಿರುವ ಮಂಗಳೂರು ವಿವಿ ಪದವಿ ಸಂಧ್ಯಾ ಕಾಲೇಜು, ಮೂಡುಬಿದಿರೆಯ ಬನ್ನಡ್ಕ, ನೆಲ್ಯಾಡಿಯಲ್ಲಿರುವ ಪದವಿ ಕಾಲೇಜುಗಳನ್ನು ಉಳಿಸುವ ನಿಟ್ಟಿನಲ್ಲಿ ನಡೆಸಬೇಕಾದ ಹೋರಾಟದ ಕುರಿತು ಚರ್ಚಿಸಲು ಡಿವೈಎಫ್‌ಐ ಉಳ್ಳಾಲ ತಾಲೂಕು ಸಮಿತಿಯು ದೇರಳಕಟ್ಟೆಯಲ್ಲಿ ಸಭೆ ನಡೆಸಿ ಹೋರಾಟ ಸಮಿತಿಯನ್ನು ರಚಿಸಿತು.
ಕೊಣಾಜೆ ವಿವಿ ಕ್ಯಾಂಪಸ್ನಲ್ಲಿರುವ ಪದವಿ ಕಾಲೇಜು ಸಹಿತ ಮುಚ್ಚುವ ಭೀತಿಯಲ್ಲಿರುವ ನಾಲ್ಕು ಕಾಲೇಜುಗಳನ್ನು ಉಳಿ ಸಲು ಶಾಶ್ವತ ಪರಿಹಾರದ ಕುರಿತು ಸಭೆಯು ಚರ್ಚಿಸಿತಲ್ಲದೆ ವಿವಿ ಆಡಳಿತದ ಪದವಿ ಕಾಲೇಜುಗಳನ್ನು ಸರಕಾರವೇ ವಶಕ್ಕೆ ಪಡೆದುಕೊಂಡು ಪದವಿ ಶಿಕ್ಷಣ ಇಲಾಖೆಯ ಮೂಲಕ ನಡೆಸಬೇಕು ಎಂದು ಆಗ್ರಹಿಸಿತು.
ಜುಲೈ 15ರಂದು ಮಂಗಳೂರು ವಿವಿ ಮುಂದೆ ಸಾಮೂಹಿಕ ಜನಾಗ್ರಹ ಧರಣಿ ನಡೆಸಿ ಸರಕಾರದ ಮುಂದೆ ಹಕ್ಕೊತ್ತಾಯ ಮಂಡಿಸಲು ಸಭೆ ನಿರ್ಧರಿಸಿತು. ಅಲ್ಲದೆ ಮಂಗಳೂರು ವಿ ವಿ ಪದವಿ ಕಾಲೇಜುಗಳ ಉಳಿಸಿ ಹೋರಾಟ ಸಮಿತಿ ರಚಿಸಲಾಯಿತು.
ಅಧ್ಯಕ್ಷತೆಯನ್ನು ನ್ಯಾಯವಾದಿ ನಿತಿನ್ ಕುತ್ತಾರ್ ವಹಿಸಿದ್ದರು. ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಿವೈಎಫ್‌ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ ಕಾರ್ಯಕ್ರಮ ನಿರೂಪಿಸಿದರು. ಜಿಪಂ ಮಾಜಿ ಸದಸ್ಯ ಅಝೀಝ್ ಮಲಾರ್, ಪದ್ಮಾವತಿ ಶೆಟ್ಟಿ, ಸಾಮಾಜಿಕ ಹೋರಾಟಗಾರರಾದ ನಝೀರ್ ಉಳ್ಳಾಲ್, ಕೃಷ್ಣಪ್ಪ ಸಾಲ್ಯಾನ್, ಸುಕುಮಾರ್ ತೊಕ್ಕೊಟ್ಟು, ಜಯಂತ್ ನಾಯ್ಕ್, ರಫೀಕ್ ಹರೇಕಳ, ಅಶ್ರಫ್ ಹರೇಕಳ, ಉಸ್ಮಾನ್ ದೇರಳಕಟ್ಟೆ, ಹಸೈನಾರ್ ದೇರಳಕಟ್ಟೆ, ಡಿಐ ಅಬೂಬಕ್ಕರ್ ಕೈರಂಗಳ, ಡಾ.ಉದಯ್ ಇರ್ವತ್ತೂರು, ಮನೋಜ್ ವಾಮಂಜೂರು, ರಝಾಕ್ ಮುಡಿಪು, ಸುನೀಲ್ ತೇವುಲ, ರಝಾಕ್ ಮೊಂಟೆಪದವು, ಇಸ್ಮಾಯಿಲ್ ಹರೇಕಳ, ಅಶ್ಫಾಕ್ ಅಲೇಕಳ, ಅಲ್ತಾಫ್ ಮುಡಿಪು, ನವಾಝ್ ದೇರಳಕಟ್ಟೆ ಉಪಸ್ಥಿತರಿದ್ದರು.