Mangalore: ‘ಯಾರೋ ರಾಜೀನಾಮೆ ಕೇಳಿದರೆಂದು ನಾನು ನೀಡಲಾರೆ’ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧ: ಹರೀಶ್ ಕುಮಾರ್

Mangalore: ‘ಯಾರೋ ರಾಜೀನಾಮೆ ಕೇಳಿದರೆಂದು ನಾನು ನೀಡಲಾರೆ’ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧ: ಹರೀಶ್ ಕುಮಾರ್


ಮಂಗಳೂರು: ದ.ಕ. ಲೋಕಸಭಾ ಸೋಲಿನಲ್ಲಿ ಜಿಲ್ಲಾಧ್ಯಕ್ಷನಾಗಿ ನನ್ನ ಜವಾಬ್ಧಾರಿಯೂ ಇದೆ ಎಂಬುದನ್ನು ಒಪ್ಪುತ್ತೇನೆ. ಆದರೆ ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಯಾರೋ ರಾಜೀನಾಮೆ ಕೇಳಿದರೆಂದು ನಾನು ನೀಡಲಾರೆ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ. 

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ವಾಟ್ಸಾಪ್‌ಗಳಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ರಾಜೀನಾಮೆ ಒತ್ತಾಯದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಪಕ್ಷದ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸಿದ್ದೇನೆಯೇ ಹೊರತು ಪಕ್ಷದ ಅಧ್ಯಕ್ಷ ಎಂದು ಹೇಳಿಕೊಂಡು ನನ್ನದೇ ಗ್ರೂಪ್ ಕಟ್ಟಿಕೊಂಡು ಹೋಗಿಲ್ಲ. ಪಕ್ಷದ ಜವಾಬ್ಧಾರಿಯುತ ನಾಯಕರು, ಕಾರ್ಯಕರ್ತರು, ಶಾಸಕರು ಅಥವಾ ವಿಧಾನಸಭೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಅಥವಾ ಲೋಕಸಭೆಯಲ್ಲಿ ಇತ್ತೀಚೆಗೆ ಸ್ಪರ್ಧಿಸಿರುವ ಪದ್ಮರಾಜ್ ಅವರು ರಾಜೀನಾಮೆ ಕೇಳುವುದರಲ್ಲಿ ಅರ್ಥವಿದೆ. ಅದು ಬಿಟ್ಟು ವಾಟ್ಸಾಪ್ ಯುನಿವರ್ಸಿಟಿಯಲ್ಲಿ ರಾಜೀನಾಮೆ ಕೇಳಿದರೆ ಆಗುವುದಿಲ್ಲ. ನಾನು ವಾಟ್ಸಾಪ್ ಯುನಿವರ್ಸಿಟಿ ವಿದ್ಯಾರ್ಥಿ ಅಲ್ಲ. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಹಲವು ಹುದ್ದೆಗಳ ಜವಾಬ್ಧಾರಿಯನ್ನು ನಿರ್ವಹಿಸಿದ್ದೇನೆ. ಮನೆಯಲ್ಲಿ ಕುಳಿತವನನ್ನು ಪಕ್ಷ ಜಿಲ್ಲಾಧ್ಯಕ್ಷನಾಗಿ ಮಾಡಿಲ್ಲ. 89ರಲ್ಲಿ ನನಗೆ ವಿಧಾನಸಭೆಗೆ ಟಿಕೆಟ್ ನೀಡುವ ನಿಟ್ಟಿನಲ್ಲಿ ಬಿ ಫಾರಂ ನೀಡಲಾಗಿತ್ತು. ಅದಕ್ಕಾಗಿ ಕೆಲಸ ಆರಂಭಿಸಿದ್ದೆ. ಕೊನೆ ಘಳಿಗೆಯಲ್ಲಿ ಬಿ ಫಾರಂ ರದ್ದಾಯಿತು. ಆ ಸಂದರ್ಭ ಪಕ್ಷ ಭಾರೀ ಬಹುಮತದಲ್ಲಿ ಗೆದ್ದಿತ್ತು. ನಾನು ಬಳಿಕವೂ ಪಕ್ಷದಲ್ಲಿ ನಿಷ್ಟಾವಂತನಾಗಿ ದುಡಿಯುತ್ತಿದ್ದೇನೆ. ೨೦೦೪ರಲ್ಲಿ ಮತ್ತೆ ಟಿಕೆಟ್ ದೊರೆಯಿತು. ಪಕ್ಷಕ್ಕೆ ೪೦ ಸ್ಥಾನ ದೊರಕಿತ್ತು. ನಾನೂ ಸೋತೆ. ನನ್ನನ್ನು ಇಂತವರು ಸೋಲಿಸಿದರು ಎಂದು ನಾನು ಕೆಪಿಸಿಸಿಗೆ ದೂರು ನೀಡಿಲ್ಲ. ಯಾರಿಂದಲೂ ಯಾರನ್ನೂ ಸೋಲಿಸಲು ಅಥವಾ ಗೆಲ್ಲಿಸಲು ಆಗುವುದಿಲ್ಲ ಎಂದು ಹೇಳಿದರು. 

ರಾಜೀನಾಮೆ ಯಾರೂ ಕಿಸೆಯಲ್ಲಿ ಇಟ್ಟುಕೊಂಡು ಓಡಾಡುವುದಿಲ್ಲ. ಜಿಲ್ಲಾಧ್ಯಕ್ಷರನ್ನು ಪಕ್ಷ ನೇಮಕ ಮಾಡುವುದು. ಬ್ಲಾಕ್, ಜಿಲ್ಲಾ ಅಧ್ಯಕ್ಷರಿಗೆ ಯಾವ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಅರಿವು ಇರುತ್ತದೆ. ಪಕ್ಷ ಸೋತಿತು ಅದಕ್ಕಾಗಿ ವಾಟ್ಸಾಪ್ ಯುನಿವರ್ಸಿಟಿಗಳಲ್ಲಿ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದಾಕ್ಷಣ ನೀಡಿ ನಾನು ಓಡಿ ಹೋಗಲು ಆಗುವುದಿಲ್ಲ. ಜಿಲ್ಲೆಯಲ್ಲಿ ಹಿಂದೆ ಜನಾರ್ದನಪೂಜಾರಿಯವರು, ಐದು ಬಾರಿ, ಮೊಯ್ಲಿಯವರು ಸೋತಿದ್ದಾರೆ. ಜಿ.ಪಂ, ತಾಪಂ, ಮನಪಾಗಳಲ್ಲಿ ಪಕ್ಷ ಸೋತಿದೆ. ಸೋತ ತಕ್ಷಣ ಯಾರೂ ಜಿಲ್ಲಾಧ್ಯಕ್ಷರ ರಾಜೀನಾಮೆ ನೀಡಿಲ್ಲ. ಅಂತಹ ಪರಂಪರೆ ಇದ್ದರೆ ನಾನು ಈ ಬಗ್ಗೆ ಆಲೋಚಿಸಬಹುದಿತ್ತು. ಆದರೆ ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿದ್ದು, ಪಕ್ಷದ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು. 

ಎರಡು ಬಾರಿಯ ವಿಧಾನಸಭೆ, ಎರಡು ಬಾರಿಯ ಲೋಕಸಭೆ ಮತ್ತು ಗ್ರಾಪಂ, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ನಗರ ಪಾಲಿಕೆ ಹೀಗೆ ಕಳೆದ ಏಳು ವರ್ಷಗಳ ಅವಧಿಯಲ್ಲಿ ನಡೆದ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷವನ್ನು ದಡ ಮುಟ್ಟಿಸಲಾಗದ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್ರ ಬದಲಾವಣೆಗೆ ವಾಟ್ಸಾಪ್ ಗ್ರೂಪ್ ಮೂಲಕ ಅಭಿಯಾನ ಆರಂಭಗೊಂಡಿದೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ಸೋತ ಹಿನ್ನೆಲೆಯಲ್ಲಿ ಹರೀಶ್ ಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕು ಎಂಬ ಬೇಡಿಕೆ ಕಾರ್ಯಕರ್ತರಲ್ಲಿ ವ್ಯಕ್ತವಾಗಿದೆ.  ‘ಡಿಸಿಸಿ ಅಧ್ಯಕ್ಷರ ಬದಲಾವಣೆ ಹೋರಾಟ ಸಮಿತಿ’ ಎಂಬ  ವಾಟ್ಸಾಪ್  ಗ್ರೂಪ್ ರಚಿಸಿ ಅಭಿಯಾನ ಆರಂಭಗೊಂಡಿವೆ. ಈ ಗ್ರೂಪ್‌ನಲ್ಲಿ 9 ಅಡ್ಮಿನ್‌ಗಳಿದ್ದು, ಸದ್ಯ 722 ಮಂದಿ ಸದಸ್ಯರಾಗಿದ್ದಾರೆ. ಬಿರುಸಿನ ಚರ್ಚೆಯ ಜೊತೆಗೆ ಅಧ್ಯಕ್ಷ ಹರೀಶ್ ಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕು. ಇಲ್ಲದಿದ್ದರೆ ಹೈಕಮಾಂಡ್ ಅವರನ್ನು ಬದಲಾವಣೆ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮುಖಂಡರಾದ ಶುಭೋದಯ ಆಳ್ವ, ಸುರೇಂದ್ರ ಕಂಬಳಿ, ಸುಹಾನ್ ಆಳ್ವ,ಪ್ರಕಾಶ್ ಸಾಲಿಯಾನ್, ನೀರಜ್ ಪಾಲ್, ಜಿತೇಂದ್ರ ಸುವರ್ಣ, ಭರತೇಶ್ ಅಮೀನ್ ಉಪಸ್ಥಿತರಿದ್ದರು. 

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article