.jpeg)
Mangalore: ಬಿಜೆಪಿಗರು ಅಭಿವೃದ್ಧಿ ಬಗ್ಗೆ ಯೋಚಿಸಲಿ: ಪದ್ಮರಾಜ್ ಆರ್. ಪೂಜಾರಿ
ಮಂಗಳೂರು: ಜಿಲ್ಲೆಯ ಬಿಜೆಪಿ ಜನಪ್ರತಿನಿಧಿಗಳು ಪ್ರಚೋದನಕಾರಿಯಾಗಿ ಮಾತನಾಡದೆ ಅಭಿವೃದ್ಧಿ ಬಗ್ಗೆ ಯೋಚಿಸಬೇಕು. ಬೋಳಿಯಾರ್‌ನಂಥ ಘಟನೆ ನಡೆದಾಗ ರಾಜ್ಯ ನಾಯಕರು ಇಲ್ಲಿಗೆ ಬಂದು ಏನು ಮಾಡುವುದಕ್ಕಿದೆ? ಬೋಳಿಯಾರ್ ಘಟನೆಯಲ್ಲಿ ಗಾಯಗೊಂಡವರ ಕುಟುಂಬಕ್ಕೆ ಸಮಾಧಾನ ಯಾರು ಹೇಳಬೇಕು. ಅವರ ಕಷ್ಟ ಪರಿಹರಿಸುವವರು ಯಾರು? ಯುವಕರು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಅವರು ಜೂ.14 ರಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ದ.ಕ. ಜಿಲ್ಲೆಯಲ್ಲಿರುವ ಸಂಸದರು ಕೇವಲ ಬಿಜೆಪಿಗೆ ಮಾತ್ರ ಸಂಸದರಲ್ಲ. ಅವರು ಜಿಲ್ಲೆಯ ಎಲ್ಲಾ ಜನತೆಗೆ ಸಂಸದರು ಹಾಗೆಯೇ ತಮ್ಮ ತಮ್ಮ ಕ್ಷೇತ್ರದಲ್ಲಿರುವ ಶಾಸಕರುಗಳು ಕೂಡ ಬಿಜೆಪಿ ಶಾಸಕರಲ್ಲ ಕ್ಷೇತ್ರದ ಜನತೆಗೆ ಶಾಸಕರು ಅವರುಗಳು ಶಾಂತಿ ಕದಲಿಸುವ ಬದಲು ಅಭಿವೃದ್ಧಿಯ ಬಗ್ಗೆ ಮಾತನಾಡಬೇಕು ಎಂದರು.
ಈಗಾಗಲೇ ದ.ಕ. ಜಿಲ್ಲೆಯು ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣಪಟ್ಟಿಯನ್ನು ಕಟ್ಟಿಕೊಂಡಿದ್ದು, ಶಾಸಕರುಗಳು ಮತ್ತು ಸಂಸದರು ಅದನ್ನು ತೆಗೆಯುವ ಕೆಲಸ ಮಾಡಬೇಕು ಎಂದು ಹೇಳಿದರು.
ಮಸೀದಿಗೆ ಬಂದು ಪರಿಶೀಲಿಸಲು ಸವಾಲು:
ಜಿಲ್ಲಾ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಶಾಹುಲ್ ಹಮೀದ್ ಮಾತನಾಡಿ, ಬೆಳ್ತಂಗಡಿ ಶಾಸಕರು ಪ್ರಚೋದನಕಾರಿಯಾಗಿ ಮಾತನಾಡುತ್ತಿದ್ದಾರೆ. ಬೋಳಿಯಾರ್ ಘಟನೆ ವಿಚಾರದಲ್ಲಿ ಸ್ಪೀಕರ್ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ. ಶಾಸಕರು ನಿರಂತರವಾಗಿ ಸಮಾಜವನ್ನು ಒಡೆಯುವ, ಕೋಮು ದ್ವೇಷದ ಮಾತನ್ನು ಆಡುತ್ತಿದ್ದಾರೆ. ಮಸೀದಿಯಲ್ಲಿ ಶಸ್ತ್ರ ಇದೆ ಎನ್ನುವ ಅವರು ಮಸೀದಿಗೆ ಬಂದು ಪರಿಶೀಲಿಸಲಿ ಎಂದು ಸವಾಲು ಹಾಕಿದರು.
ಕಳೆದ 6 ವರ್ಷಗಳಿಂದ ಶಾಸಕರಾಗಿರುವ ಹರೀಶ್ ಪೂಂಜ ಅವರೆ ಕಳೆದ 5 ವರ್ಷದಲ್ಲಿ ನಿಮ್ಮದೇ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇತ್ತು ಆಗ ಯಾಕೆ ಮಸೀದಿಗೆ ಬಂದು ಪರಿಶೀಲಿಸಲಿಲ್ಲ. ಮಸೀದಿ ಒಂದು ಕೇವಲ ಪ್ರಾರ್ಥನೆಯ ಸಭಾಂಗಣವಾಗಿದೆ. ಅಲ್ಲಿ ಬೇರೆ ಏನೂ ಇಲ್ಲ. ನೀವು ಯಾವ ಮಸೀದಿಗೆ ಬೇಕಾದರೂ ಬಂದು ಬರಿಶೀಲಿಸಬಹುದು ನಿಮಗೆ ಸ್ವಾಗತವಿದೆ ಎಂದು ಹೇಳಿದರು.
ಮುಖಂಡರಾದ ಮಂಜುನಾಥ ಭಂಡಾರಿ, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಶುಭೋದಯ ಆಳ್ವ, ಜೋಕಿಂ, ನಝೀರ್ ಬಜಾಲ್ ಇದ್ದರು.