
Mangalore: ವಿದ್ಯುತ್ ಸುರಕ್ಷತಾ ಜಾಗೃತಿ ಸಪ್ತಾಹ
ಮಂಗಳೂರು: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ (ಮೆಸ್ಕಾಂ) ಹಾಗೂ ವಿದ್ಯುತ್ ಪರಿವೀಕ್ಷಣಾ ಇಲಾಖೆ, ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ‘ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹದ’ ಅಂಗವಾಗಿ ಸುರಕ್ಷತಾ ಜಾಗೃತಿ ಜಾಥಾಕ್ಕೆ ಜೂ.26 ರಂದು ಚಾಲನೆ ನೀಡಲಾಯಿತು.
ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ. ಪದ್ಮಾವತಿ ಅವರು ಬಿಜೈಯಲ್ಲಿರುವ ಮೆಸ್ಕಾಂ, ಕಾರ್ಪೊರೇಟ್ ಕಚೇರಿ ಆವರಣದಲ್ಲಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಮೆಸ್ಕಾಂ ನೌಕರರು ತಮ್ಮ ಕರ್ತವ್ಯದ ಸಂದರ್ಭದಲ್ಲಿ ಸುರಕ್ಷತೆಗೆ ಆದ್ಯತೆ ನೀಡುವುದು ಅತಿ ಅಗತ್ಯವಾಗಿದೆ. ಕಂಪೆನಿಯ ಹಿತ ಹಾಗೂ ಗ್ರಾಹಕರ ತೃಪ್ತಿಯನ್ನು ಗಮನದಲ್ಲಿಕೊಂಡು ಕೆಲಸ ಮಾಡುವುದರ ಜೊತೆಗೆ ಸುರಕ್ಷತೆಗೆ ಮೊದಲ ಪ್ರಾಶಸ್ತ್ಯ ನೀಡಬೇಕಾಗಿದ್ದು, ಕಂಪೆನಿಯ ವತಿಯಿಂದ ತಮಗೆ ನೀಡಿರುವ ಸುರಕ್ಷತಾ ಸಾಮಗ್ರಿಗಳನ್ನು ಕರ್ತವ್ಯದ ಅವಧಿಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕರ್ತವ್ಯದ ಅವಧಿಯಲ್ಲಿ ಯಾವುದೇ ರೀತಿಯ ಅಮಲು ಪದಾರ್ಥಗಳನ್ನು ಸೇವಿಸಬಾರದು ಹಾಗೂ ಗ್ರಾಹಕರೊಡನೆ ಸದಾ ಸೌಜನ್ಯದಿಂದ ವರ್ತಿಸಬೇಕುಎಂದು ಕರೆ ನೀಡಿದರು.
ಮೆಸ್ಕಾಂ ತಾಂತ್ರಿಕ ನಿರ್ದೇಶಕ ಹೆಚ್.ಜಿ. ರಮೇಶ್, ಉಪಮುಖ್ಯ ವಿದ್ಯುತ್ ಪರಿವೀಕ್ಷಕ ಕೆ.ಎಂ. ಕಾಂತರಾಜು, ಮುಖ್ಯ ಇಂಜಿನಿಯರ್ ಪುಷ್ಪಾ, ಮುಖ್ಯ ಆರ್ಥಿಕ ಅಧಿಕಾರಿ ಮೌರಿಸ್ ಡಿ’ಸೋಜ, ಆರ್ಥಿಕ ಸಲಹೆಗಾರ ಬಿ. ಹರಿಶ್ಚಂದ್ರ, ಕೃಷ್ಣರಾಜ್, ಅಧೀಕ್ಷಕ ಇಂಜಿನಿಯರ್ ಲೋಹಿತ್, ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಮಾನ್ಯತೆ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮಂಗಳೂರು ವಿಭಾಗ ವ್ಯಾಪ್ತಿಯ ಪವರ್ಮೆನ್ಗಳು ಸಕ್ರಿಯವಾಗಿ ಭಾಗವಹಿಸಿದ ಜಾಥಾವು ಬಿಜೈಯಿಂದ ಬಳ್ಳಾಲ್‌ಬಾಗ್, ಲೇಡಿಹಿಲ್ ಮೂಲಕ ಸಾಗಿತು. ಸುರಕ್ಷತೆಯ ಬಗ್ಗೆ ಭಿತ್ತಿ ಪತ್ರಗಳನ್ನು ಪ್ರದರ್ಶಿಸಲಾಯಿತು.
ವಿದ್ಯುತ್ ಸುರಕ್ಷತಾ ಜಾಗೃತಿ ಕಾರ್ಯಕ್ರಮವು ಮೆಸ್ಕಾಂ ವ್ಯಾಪ್ತಿಯಲ್ಲಿ ಮುಂದಿನ ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮಗಳ ಮೂಲಕ ನಡೆಯಲಿದೆ. ಸಾರ್ವಜನಿಕ ಸಂಪರ್ಕಾಧಿಕಾರಿ ವಸಂತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.