
Mangalore: ನಿಷೇಧಿತ ಡ್ರಗ್ಸ್- ಪ್ರತಿ ಶಾಲೆಗಳಲ್ಲೂ ಕೌನ್ಸಿಲಿಂಗ್ ಸೆಂಟರ್ ಮೂಲಕ ಜಾಗೃತಿ: ಮುಲ್ಲೈ ಮುಗಿಲನ್
ಮಂಗಳೂರು: ನಿಷೇಧಿತ ಡ್ರಗ್ಸ್‌ಗಳ ಚಟ ಮಾನಸಿಕ ರೋಗದ ಲಕ್ಷಣವಾಗಿದ್ದು, ಪ್ರತಿ ಶಾಲೆಗಳಲ್ಲೂ ಕೌನ್ಸಿಲಿಂಗ್ ಸೆಂಟರ್ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ದ.ಕ. ಜಿಲ್ಲಾಡಳಿತ, ಮಂಗಳೂರು ನಗರ ಪೊಲೀಸ್ ಕಮಿಷನರೇಟ್, ಇಂಡಿಯನ್ ಕೋಸ್ಟ್ಗಾರ್ಟ್, ಮಂಗಳೂರು ಕಸ್ಟಮ್ಸ್ ಕಮಿಷನರೇಟ್ ಹಾಗೂ ನಗರದ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಕೌನ್ಸೆಲಿಂಗ್ ವಿಭಾಗದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಲಾದ ಮಾದಕ ದ್ರವ್ಯ ಮುಕ್ತ ಭಾರತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ನೀಡಿದರು.
ದ.ಕ. ಜಿಲ್ಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳು ಹೆಚ್ಚಾಗಿದ್ದು, ನಿಷೇಧಿತ ಮಾದಕ ದ್ರವ್ಯಗಳ ಪೂರೈಕೆ, ಬೇಡಿಕೆಯೂ ಹೆಚ್ಚಾಗುತ್ತಿದೆ. ಈ ಪೂರೈಕೆ ಜಾಲವನ್ನು ತಡೆಯುವ ಪ್ರಯತ್ನ ನಿರಂತವಾಗಿ ನಡೆಯುತ್ತಿದ್ದರೂ ಬೇಡಿಕೆ ಸಂಪೂರ್ಣವಾಗಿ ತಡೆಯುವ ನಿಟ್ಟಿ ನಲ್ಲಿಯೂ ಪ್ರಯತ್ನ ಆಗಬೇಕಾಗಿದೆ. ಆ ನಿಟ್ಟಿನಲ್ಲಿ ಮಕ್ಕಳಿಗೆ ಅದರ ಸಾಧಕ ಬಾಧಕಗಳನ್ನು ತಿಳಿಸುವ ಕಾರ್ಯ ಜಿಲ್ಲಾ ಮಟ್ಟದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು.
ದ.ಕ. ಜಿಲ್ಲೆಯಲ್ಲಿ 528 ಕಾಲೇಜುಗಳಲ್ಲಿ ಡ್ರಗ್ಸ್ ವಿರೋಧಿ ಘಟಕಗಳನ್ನು ತೆರೆಯಲಾಗಿದೆ. ಅತ್ಯಂತ ಗೌಪ್ಯವಾಗಿ ಕಾರ್ಯಾ ಚರಿಸುವ ಈ ಘಟಕಗಳಿಗೆ ವಿದ್ಯಾರ್ಥಿಗಳು ಕೂಡಾ ತಮ್ಮ ಸುತ್ತಮುತ್ತ ಡ್ರಗ್ಸ್ ಪೂರೈಕೆ, ಸೇವನೆ ಕುರಿತು ಮಾಹಿತಿ ನೀಡುವ ಮೂಲಕ ತಮ್ಮ ಸಹಪಾಠಿಗಳು, ಸ್ನೇಹಿತರು ತಪ್ಪು ದಾರಿಗೆ ಇಳಿಯುವುದನ್ನು ತಪ್ಪಿಸಬಹುದು ಎಂದು ಹೇಳಿದರು.
ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಮಾತನಾಡಿ, ಕಳೆದ ಆರು ತಿಂಗಳಲ್ಲಿ ಡ್ರಗ್ಸ್ ಪೂರೈಕೆ, ಸೇವನೆಗೆ ಸಂಬಂಧಿಸಿ 500ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅವುಗಳಲ್ಲಿ ಸುಮಾರು 400 ಪ್ರಕರಣಗಳು ಡ್ರಗ್ಸ್ ಸೇವನೆಗೆ ಸಂಬಂಧಿಸಿದ್ದಾಗಿವೆ ಎಂದರು.
ಪ್ರತಿನಿತ್ಯ ಹಲವು ಮಕ್ಕಳ ತಾಯಂದಿರು ತಮ್ಮ ಮಕ್ಕಳು ಕೆಟ್ಟ ರೀತಿಯ ವರ್ತನೆ, ಕೆಟ್ಟ ಚಟಕ್ಕೆ ಬಲಿಯಾಗುತ್ತಿರುವ ಬಗ್ಗೆ ದೂರುಗಳನ್ನು ನೀಡುತ್ತಾರೆ. ಪೂರೈಕೆದಾರರನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸುವ ಕಾರ್ಯವನ್ನೂ ಪೊಲೀಸ್ ಇಲಾಖೆ ಯಿಂದ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಕೂಡಾ ಈ ಬಗ್ಗೆ ಸ್ವಯಂ ಜಾಗೃತಿಯನ್ನು ಹೊಂದಿ ಈ ಚಟದಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಮಂಗಳೂರು ಕಸ್ಟಮ್ಸ್ ಕಮಿಷನರೇಟ್‌ನ ಆಯುಕ್ತ ಪಿ. ವಿನಿತಾ ಶೇಖರ್ ಮಾತನಾಡಿ, ಇದೊಂದು ಸಾಮಾಜಿಕ ಪಿಡುಗಾಗಿದ್ದು, ಕಸ್ಟಮ್ಸ್ ಇಲಾಖೆಯು ಎನ್ಡಿಪಿಎಸ್ ಕಾಯ್ದೆಯಡಿ ನಿಷೇಧಿತ ಡ್ರಗ್ಸ್‌ಗಳ ಶೋಧ ಮತ್ತು ವಶಪಡಿಸುವ ಕಾರ್ಯಾಚರಣೆಯನ್ನು ನಡೆಸುತ್ತದೆ ಎಂದರು.
ಭಾರತವು ಅಫೀಮು ಉತ್ಪಾದಿಸುವ ದೇಶಗಳ ನಡುವೆ ಸಿಲುಕಿಕೊಂಡಿದೆ. ಒಂದೆಡೆ ವಿಶ್ವದಲ್ಲೇ ಅತೀ ಹೆಚ್ಚು ಪರ್ವತ ಪ್ರದೇಶಗಳಿಂದ ಕೂಡಿದ ಅಫೀಮು ಉತ್ಪಾದಿಸುವ ದೇಶಗಳಾದ ಮ್ಯಾನ್ಮಾರ್, ವಿಯೆಟ್ನಾಂ, ಲಾವೋಸ್ ಹಾಗೂ ಇನ್ನೊಂದೆಡೆ ಅಕ್ರಮ ಮಾದಕ ದ್ರವ್ಯಗಳನ್ನು ಪೂರೈಸುವ ದೇಶಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇರಾನ್ನಿಂದ ಗಡಿ ಪ್ರದೇಶಗಳ ಮೂಲಕ ದೇಶಕ್ಕೆ ಅಕ್ರಮ ಡ್ರಗ್ಸ್‌ಗಳು ಪೂರೈಕೆಯಾಗುತ್ತಿವೆ. ಈ ರೀತಿ ಅಕ್ರಮ ಡ್ರಗ್ಸ್ ಪೂರೈಕೆ ಜಾಲವು ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸಿನ ನೆರವು ಒದಗಿಸುತ್ತಿರುವುದು ಕೂಡಾ ಕಂಡು ಬಂದಿದೆ ಎಂದರು.
ಜಿಲ್ಲಾ ಕೋಸ್ಟ್ ಗಾರ್ಡ್ ಕೇಂದ್ರದ ಡಿಐಜಿ ಪಿ.ಕೆ. ಮಿಶ್ರಾ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸ್ನೇಹಿತರು, ಅಕ್ಕಪಕ್ಕ ದಲ್ಲಿರುವವರ ವರ್ತನೆಯಲ್ಲಿ ವಿಚಿತ್ರ ಬದಲಾವಣೆಗಳಾದಾಗ ಅದನ್ನು ಗಮನಿಸಿ ಸಂಬಂಧಪಟ್ಟವರಿಗೆ ತಿಳಿಸುವ ಮೂಲಕ ಉತ್ತಮ ಸಮಾಜಕ್ಕೆ ಕೊಡುಗೆ ನೀಡಬಹುದು ಎಂಬುದನ್ನು ಕಥೆಯ ಮೂಲಕ ವಿವರಿಸಿದರು.
ಸಂತ ಅಲೋಶಿಯಸ್ ಪಿಯು ಕಾಲೇಜಿನ ಪ್ರಾಂಶುಪಾಲ ಫಾ. ಕ್ಲಿಫರ್ಡ್ ಸಿಕ್ವೇರಾ, ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಮನಶಾಸ್ತ್ರ ವಿಭಾಗದ ಡಾ. ಬಿ.ಕೆ. ಕಿರಣ್ ಕುಮಾರ್ ಉಪಸ್ಥಿತರಿದ್ದರು.