Mangalore: ಬೋಳಿಯಾರ್ ಚೂರಿ ಇರಿತ ಘಟನೆ-ನಿಷ್ಟಪಕ್ಷಪಾತ ಸಮಗ್ರ ತನಿಖೆಗೆ ಕ್ಯಾ. ಬ್ರಿಜೇಶ್ ಚೌಟ ಹಾಗೂ ಸತೀಶ್ ಕುಂಪಲ ಆಗ್ರಹ

Mangalore: ಬೋಳಿಯಾರ್ ಚೂರಿ ಇರಿತ ಘಟನೆ-ನಿಷ್ಟಪಕ್ಷಪಾತ ಸಮಗ್ರ ತನಿಖೆಗೆ ಕ್ಯಾ. ಬ್ರಿಜೇಶ್ ಚೌಟ ಹಾಗೂ ಸತೀಶ್ ಕುಂಪಲ ಆಗ್ರಹ


ಮಂಗಳೂರು: ಪ್ರಧಾನಿ ನರೇಂದ್ರ ಮೋದಿ 3.0 ಅವಧಿಯ ಅಧಿಕಾರ ಸ್ವೀಕಾರದಂದು ಬೋಳಿಯಾರ್‌ನಲ್ಲಿ ನಡೆದ ವಿಜಯೋತ್ಸವ ಆಚರಣೆ ವೇಳೆ ಬಿಜೆಪಿ ಕಾರ್ಯಕರ್ತರಿಗೆ ಇರಿತದ ಘಟನೆಗೆ ಸಂಬಂಧಿಸಿ ನಿಷ್ಪಕ್ಷಪಾತವಾಗಿ ಸಮಗ್ರ ತನಿಖೆ ನಡೆಸಬೇಕು. ಬಿಜೆಪಿ ಕಾರ್ಯಕರ್ತರ ವಿರುದ್ಧ ದಾಖಲಿಸಿದ ಸುಳ್ಳು ದೂರು ವಾಪಸ್ ಪಡೆಯಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ತೀವ್ರ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಪೊಲೀಸ್ ಕಮಿಷನರ್ ಸುದ್ದಿಗೋಷ್ಠಿ ನಡೆಸುವ ಮೂಲಕ ತನಿಖೆಯ ಹಾದಿ ತಪ್ಪಿಸುವ ಯತ್ನ ನಡೆಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಮಸೀದಿ ಎದುರು ಮೆರವಣಿಗೆ ವೇಳೆ ಪಾಕಿನ ಕುನ್ನಿಗಳೇ ಎಂದು ಕೂಗಿದ್ದಾರೆ ಎಂದು ಹೇಳುತ್ತಿದ್ದಾರೆ, ಹಾಗಿದ್ದರೆ ಪೊಲೀಸರಿಗೆ ದೂರು ನೀಡಬಹುದಿತ್ತು. ಅದು ಬಿಟ್ಟು ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಅಲ್ಲದೆ ಒಂದು ದಿನದ ನಂತರ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರತಿ ದೂರು ನೀಡಲಾಗಿದೆ. ಇದು ಭಾರತ್ ಮಾತಾಕೀ ಜೈ ಎಂದವರ ಮೇಲೆ ನೀಡಿದ ದೂರು ಆಗಿದೆ. ಹಾಗಾದರೆ ಭಾರತದಲ್ಲಿ ಭಾರತ ಮಾತೆಗೆ ಜೈಕಾರ ಹಾಕುವಂತಿಲ್ಲವೇ ಎಂದು ಪ್ರಶ್ನಿಸಿದರು.

ಸೇಡಿನ ರಾಜಕಾರಣ..

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ದ.ಕ.ಜಿಲ್ಲೆಯಲ್ಲಿ ಕಳೆದ ಕೆಲವು ಸಮಯದಿಂದ ಅಹಿತಕರ ಘಟನೆ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡಿ ತೆರಳಿದ ಕೂಡಲೇ ಬೆಳ್ತಂಗಡಿಯಲ್ಲಿ ಶಾಸಕರ ಮೇಲೆ ಕೇಸ್, ಈಗ ಉಸ್ತುವಾರಿ ಸಚಿವರು ಬಂದುಹೋದ ದಿನವೇ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸ್ ಹಾಕುವ ಮೂಲಕ ಕಾಂಗ್ರೆಸ್ ಸೇಡಿನ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿದರು.

ಇರಿತದಿಂದ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಅದೇ ಆಸ್ಪತ್ರೆಯ ಸಮಾರಂಭಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಮಾನವೀಯತೆ ನೆಲೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿ ಸಂತ್ವನ ಕೂಡ ಹೇಳಿಲ್ಲ. ಸ್ಥಳೀಯ ಶಾಸಕರೂ ಆಸ್ಪತ್ರೆಗೆ ಭೇಟಿ ನೀಡಿಲ್ಲ. ಒಂದು ಸಮುದಾಯದ ಹಿತರಕ್ಷಕ ಎನ್ನುವವರೂ ಬಂದಿಲ್ಲ ಎಂದು ಆರೋಪಿಸಿದರು.

ಈ ಹಿಂದೆ ಕಾಂಗ್ರೆಸ್ ಕೂಡ ವಿಜಯೋತ್ಸವ ನಡೆಸಿತ್ತು. ಆಗ ಸಾಕಷ್ಟು ಪಟಾಕಿ ಸಿಡಿಸಿ ಘೋಷಣೆ ಕೂಡ ಕೂಗಿತ್ತು. ಆಗ ಬಿಜೆಪಿಗರು ಯಾವುದೇ ಆಕ್ಷೇಪ ಮಾಡಿಲ್ಲ. ಆದರೆ ಬಿಜೆಪಿ ವಿಜಯೋತ್ಸವದಲ್ಲಿ ವಿನಾ ಕಾರಣ ಇರಿತ ಪ್ರಕರಣ ನಡೆಸಲಾಗಿದೆ. ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂಬ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮುಖಂಡರಾದ ಹರಿಕೃಷ್ಣ ಬಂಟ್ವಾಳ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಸಂಜಯ ಪ್ರಭು, ರಾಜಾರಾಮ ಭಟ್ ಟಿ.ಜಿ., ಸತೀಶ್ ಆರ್ವಾರ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article