.jpeg)
Mangalore: ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಮತಾಂಧ ಶಕ್ತಿಗಳ ಅತಿರೇಕದ ವರ್ತನೆ: ನಳಿನ್ ಕುಮಾರ್ ಕಟೀಲು
ಮಂಗಳೂರು: ಪ್ರಧಾನಿ ಮೋದಿಯವರ 3.0 ಅಧಿಕಾರದ ಪ್ರಮಾಣವಚನ ದಿನ ಬೊಳಿಯಾರ್‌ನಲ್ಲಿ ನಡೆದ ವಿಜಯೋತ್ಸವದಲ್ಲಿ ಭಾಗವಹಿಸಿದ ಇಬ್ಬರು ಬಿಜೆಪಿ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಮತಾಂಧ ಶಕ್ತಿಗಳ ವರ್ತನೆ ಅತಿರೇಕಕ್ಕೆ ಹೋಗಿದೆ ಎಂದು ಬಿಜೆಪಿ ನಾಯಕ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಆರೋಪಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಹಲ್ಲೆಗೊಳಗಾದ ಹರೀಶ್ ಮತ್ತು ನಂದಕುಮಾರ್ ಮಸೀದಿ ಬಳಿ ಭಾರತ್ ಮಾತೆಗೆ ಜೈಕಾರ ಹಾಕಿದರೆಂಬ ಒಂದೇ ಕಾರಣಕ್ಕೆ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ದೇಶದಲ್ಲಿ ಭಾರತ್ ಮಾತಾಕಿ ಜೈ ಹೇಳುವುದು ಅಪರಾಧವೇ? ಈ ಬಗ್ಗೆ ಮುಖ್ಯಮಂತ್ರಿ, ಗೃಹಸಚಿವರು ಉತ್ತರಿಸಬೇಕು. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಮತಾಂಧ ಶಕ್ತಿಗಳ ವರ್ತನೆ ಅತಿರೇಕಕ್ಕೆ ಹೋಗಿದೆ. ಈ ಪ್ರಕರಣದಲ್ಲಿ ಹಿಂದಿರುವ ಎಲ್ಲ ದುಷ್ಟಶಕ್ತಿಗಳನ್ನು ಪತ್ತೆಹಚ್ಚಿ ಬಂಧಿಸಬೇಕು. ಗಾಯಗೊಂಡವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ವಿಜಯೋತ್ಸವ ಸಂದರ್ಭ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದು, ಅಲ್ಲಿರುವ ಯುವಕರು ಈ ಘಟನೆಯಲ್ಲಿ ಶಾಮೀಲಾಗಿದ್ದ ಎಂದು ಹೇಳಲಾಗುತ್ತಿದೆ. ಹಾಗಾದರೆ ಪ್ರಾರ್ಥನೆಗೆ ಬಂದವರಿಗೆ ಚೂರಿ ಸಿಕ್ಕಿದ್ದು ಹೇಗೆ? ಎಲ್ಲಿಂದ ಬಂತು ಈ ಶಸ್ತ್ರಾಸ್ತ್ರ. ಗೃಹ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಕಾರ್ಯಕರ್ತರ ಮೇಲೆ ನಿರಂತರ ದಾಳಿ, ರಸ್ತೆಯಲ್ಲೇ ನಮಾಜು, ಭಾರತ ಮಾತೆಗೆ ಜೈಕಾರ ಹಾಕುವವರ ಮೇಲೆ ಕೇಸು ಹಾಕಲಾಗುತ್ತಿದೆ. ಹಾಗಾದರೆ ನಾವು ಎಲ್ಲಿದ್ದೇವೆ ಎಂಬ ಅನುಮಾನ ಬರುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು ಹಾಗೂ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಉಪಸ್ಥಿತರಿದ್ದರು.