
Ujire: ಬರಗೆಲ್ಲುವುದಕ್ಕೆ ಕೆರೆ ಮಾದರಿ-ವರ್ಷವೊಂದರಲ್ಲೇ 193 ಕೆರೆಗಳ ಪುನಶ್ಚೇತನ
ಉಜಿರೆ: ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಂತೆ ಸಂಸ್ಥೆಯು ನಾದುರಸ್ತಿಯಲ್ಲಿರುವ ಕೆರೆಗಳಿಗೆ ಕಾಯಕಲ್ಪ ಕೊಡುವ ಕಾರ್ಯ ನಡೆಸುತ್ತಿದ್ದು, ತೀವ್ರ ಬರಗಾಲ ಎದುರಿಸಿದ 2023-24ನೇ ಸಾಲಿನಲ್ಲಿ ರಾಜ್ಯಾದ್ಯಂತ 193 ಕೆರೆಗಳ ಪುನಶ್ಚೇತನ ಕಾರ್ಯವು ಯಶಸ್ವಿಯಾಗಿ ನಡೆಸಲಾಗಿದೆಯೆಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್‌ಕುಮಾರ್ ಎಸ್.ಎಸ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 36,000 ಕೆರೆಗಳಿವೆಯೆಂಬ ಮಾಹಿತಿಯಿದೆ. ಈ ಕೆರೆಗಳು ಪುನಶ್ಚೇತನಗೊಂಡು ನೀರು ತುಂಬಿಕೊಂಡರೆ ರಾಜ್ಯದ ಸಹಸ್ರಾರು ಎಕರೆ ಪ್ರದೇಶಕ್ಕೆ ನೀರುಣಿಸಲು ಸಾಧ್ಯವಾಗಬಹುದು. ಆದರೆ ಇಂದು ಅದೆಷ್ಟೋ ಕೆರೆಗಳು ತಮ್ಮ ನೀರು ಸಂಗ್ರಹಣೆಯ ಸಾಮರ್ಥ್ಯವನ್ನು ಕಳೆದುಕೊಂಡಿವೆ, ನಿರ್ವಹಣೆಯಿಲ್ಲದೆ ಗಿಡಗಂಟಿಗಳು ಬೆಳೆದು ಹೂಳು ತುಂಬಿಕೊಂಡಿವೆ. ಮರುಳು, ಮಣ್ಣಿಗಾಗಿ ಕೆರೆಯ ಒಡಲನ್ನು ಅಗೆದು ವಿರೂಪಗೊಳಿಸಲಾಗಿದೆ. ಒತ್ತುವರಿಯಿಂದಾಗಿ ನೀರು ಹರಿದು ತರುತ್ತಿದ್ದ ಕಾಲುವೆಗಳು ಇಲ್ಲದಂತಾಗಿದೆ. ಈ ಎಲ್ಲಾ ಕಾರಣಗಳಿಂದ ಇಡೀ ಗ್ರಾಮಕ್ಕೆ ನೀರುಣಿಸುತ್ತಿದ್ದ ಕೆರೆಗಳಿದ್ದರೂ ಹನಿ ನೀರಿಗಾಗಿ ಪರದಾಡುತ್ತಿರುವ ರೈತರ ಹಾಗೂ ನೀರಿಗಾಗಿ ಕಿಲೋಮೀಟರ್‌ಗಟ್ಟಲೆ ಅಲೆಯುತ್ತಿರುವ ಮಹಿಳೆಯರ ಸಂಕಷ್ಟ ಗಮನಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹಾಗೂ ಹೇಮಾವತಿ ವಿ. ಹೆಗ್ಗಡೆ ಅವರು ಪಾರಂಪರಿಕ ಕೆರೆಗಳ ಪುನಶ್ಚೇತನಕ್ಕಾಗಿಯೇ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮವನ್ನು 2016ರಲ್ಲಿ ಪ್ರಾರಂಭಿಸಿದರು. ಇದುವರೆಗೆ ಇದರಂತೆ ರಾಜ್ಯಾದ್ಯಂತ 760 ಕೆರೆಗಳ ಪುನಶ್ಚೇತನಗೊಳಿಸಿದ್ದು, ಈ ಪೈಕಿ ಸುಮಾರು 351 ಕೆರೆಗಳಲ್ಲಿ ಬರಗಾಲದ ಸಂದರ್ಭದಲ್ಲೂ ನೀರಿರುವುದು ಈ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯೆಂಬಂತಿದೆ.
ಬರಗಾಲದ ಸಂದರ್ಭ ನೀರಿನ ಭವಣೆ ನೀಗಿಸುವ ನಾಡಿನ ಜಲಪಾತ್ರೆಗಳಂತಿರುವ ಕೆರೆಗಳ ಪುನಶ್ಚೇತನಕ್ಕೆ ಈ ವರ್ಷ ವಿಶೇಷ ಆಧ್ಯತೆ ನೀಡಲಾಗಿದೆ. ಪ್ರಸ್ತುತ ವರ್ಷವೂ ರಾಜ್ಯದ 193 ಕೆರೆಗಳ ಪುನಶ್ಚೇತನ ಕಾರ್ಯ ನಡೆಸಲಾಗಿದ್ದು, ಕೆರೆಗಳು ಸುಂದರವಾಗಿ ಪುನಶ್ಚೇತನಗೊಂಡು ನೀರು ಸಂಗ್ರಹಣೆಗೆ ಅಣಿಯಾಗಿವೆ. ಇದಕ್ಕಾಗಿ 8 ಇಂಜಿನಿಯರ‍್ಸ್‌ಗಳು, 125 ನೋಡೆಲ್ ಅಧಿಕಾರಿಗಳು ಹಾಗೂ 193 ಕೆರೆ ಸಮಿತಿಯ ಸುಮಾರು 965 ಕ್ಕೂ ಹೆಚ್ಚು ಪದಾಧಿಕಾರಿಗಳ ತಂಡ ಜಲಯೋಧರಾಗಿ ದುಡಿದು ಈ ಬೃಹತ್ ಕಾರ್ಯದ ಯಶಸ್ಸಿಗೆ ಹಗಲಿರುಳು ಶ್ರಮಿಸಿ ಅಭಿನಂದನಾರ್ಹ ಕೆಲಸ ನಿರ್ವಹಿಸಿದೆ. ಗ್ರಾಮಸ್ಥರ ಸಹಭಾಗಿತ್ವದಲ್ಲಿ ಯೋಜನೆಯ ಕಾರ್ಯಕರ್ತರ, ಅಧಿಕಾರಿಗಳ ಸಕ್ರೀಯ ತೊಡಗಿಸಿಕೊಳ್ಳುವುದರೊಂದಿಗೆ ಅತೀ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಕೆರೆ ಪುನಶ್ಚೇತನ ಕಾರ್ಯ ನಡೆಸಲು ಸಾಧ್ಯವಾಗಿದೆ.
ಕೆರೆಗಳ ದುರಸ್ತಿಗಾಗಿ 522 ಜೆ.ಸಿ.ಬಿ. ಹಾಗೂ ಹಿಟಾಚಿ ಯಂತ್ರಗಳು, 4212ಕ್ಕೂ ಅಧಿಕ ಟ್ರ್ಯಾಕ್ಟರ್ ಹಾಗೂ ಟಿಪ್ಪರ್‌ಗಳನ್ನು ಬಳಸಿಕೊಳ್ಳಲಾಯಿತು. ಹೂಳು ತೆಗೆಯುವುದು, ಏರಿ ಭದ್ರಪಡಿಸುವುದು, ಕಾಲುವೆ ಹಾಗೂ ಕೋಡಿಗಳ ರಿಪೇರಿ, ಕಲ್ಲು ಕಟ್ಟುವುದು ಮೊದಲಾದ ಕಾಮಗಾರಿಗಳ ಮೂಲಕ ಕೆರೆಗಳು ವೈಜ್ಞಾನಿಕ ಹಾಗೂ ಸುಂದರವಾಗಿ ಪುನರ್ ನಿರ್ಮಾಣಗೊಂಡಿವೆ. ಮಳೆ ಬಂದಾಗ ಮುಂದಿನ ಒಂದೆರಡು ವರ್ಷಕ್ಕೆ ಬೇಕಾದ ನೀರು ಸಂಗ್ರಹಿಸಿ ಸುತ್ತಲಿನ ಪ್ರದೇಶದ ಅಂತರ್ಜಲ ಮಟ್ಟ ಹೆಚ್ಚಿಸಿ, ಜನ-ಜಾನುವಾರುಗಳ ನೀರಿನ ಭವಣೆಯನ್ನು ಈ ಕೆರೆಗಳು ನೀಗಿಸಲಿವೆ.