Mangalore: ಕಾಂಗ್ರೆಸ್‌ನಂತೆ  ಸಂವಿಧಾನವನ್ನು ಬುಡಮೇಲು ಮಾಡಲು ಯಾರಿಂದಲೂ ಸಾಧ್ಯವಿಲ್ಲ: ಪ್ರತಾಪ ಸಿಂಹ

Mangalore: ಕಾಂಗ್ರೆಸ್‌ನಂತೆ ಸಂವಿಧಾನವನ್ನು ಬುಡಮೇಲು ಮಾಡಲು ಯಾರಿಂದಲೂ ಸಾಧ್ಯವಿಲ್ಲ: ಪ್ರತಾಪ ಸಿಂಹ


ಮಂಗಳೂರು: ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನದ ಮೂಲ ರಚನೆಯನ್ನು ಬದಲಾವಣೆ ಮಾಡಿದ್ದೇ ಕಾಂಗ್ರೆಸ್. ತುರ್ತುಪರಿಸ್ಥಿತಿ ಹೇರಿಕೆ ಹಾಗೂ ತಿದ್ದುಪಡಿ ಮೂಲಕ ಸಂವಿಧಾನವನ್ನು ಬುಡಮೇಲು ಮಾಡಿರುವುದು ಇಂದಿರಾ ಗಾಂಧಿ. ಕಾಂಗ್ರೆಸ್‌ನಂತೆ  ಸಂವಿಧಾನವನ್ನು ಬುಡಮೇಲು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಾವು ಸಂವಿಧಾನದ ರಕ್ಷಕರು ಎಂದು ಪುಂಖಾನುಪುಂಖವಾಗಿ ಮಾತನಾಡುವ ಕಾಂಗ್ರೆಸಿಗರಿಗೆ ಈ ವಿಷಯವನ್ನು ಬಿಜೆಪಿ ಮುಖಂಡರು, ಕಾರ್ಯಕರ್ತರು ತಿಳಿಸಬೇಕು ಎಂದು ಮೈಸೂರು ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದರು.

ಅವರು ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ಸಂಘಟನೆ ವತಿಯಿಂದ ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಮಂಗಳವಾರ ಸಂಜೆ ‘ತುರ್ತು ಪರಿಸ್ಥಿತಿ- ಸಂವಿಧಾನಕ್ಕೆ ಮಾಡಿದ ಅಪಚಾರ’ ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚುನಾವಣಾ ಅಕ್ರಮ ನಡೆಸಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಸಂಸತ್ ಸದಸ್ಯತ್ವ ಹಾಗೂ ಚುನಾವಣೆ ಸ್ಪರ್ಧೆಯ ಅನರ್ಹತೆಯಿಂದ ಪಾರಾಗಲು ಸಂವಿಧಾನವನ್ನು ತನಗೆ ಬೇಕಾದಂತೆ ಬಳಸಿಕೊಂಡು ದೇಶದಲ್ಲಿ ಏಕಾಏಕಿ ರಾತ್ರೋರಾತ್ರಿ ತುರ್ತು ಪರಿಸ್ಥಿತಿ ಹೇರಿದ್ದರು. ಸಂಸತ್‌ನಲ್ಲಿ ಯಾವುದೇ ಪ್ರಕ್ರಿಯೆಗಳನ್ನು ನಡೆಸದೇ ನೇರವಾಗಿ ರಾಷ್ಟ್ರಪತಿಗಳ ಮೂಲಕ ತುರ್ತು ಪರಿಸ್ಥಿತಿಯ ಆದೇಶ ಹೊರಡಿಸಿದ್ದರು. ಕಾನೂನು ಸಚಿವರು, ಕ್ಯಾಬಿನೆಟ್ ಕಾರ್ಯದರ್ಶಿ, ಗೃಹ ಕಾರ್ಯದರ್ಶಿಗೆ ತುರ್ತು ಪರಿಸ್ಥಿತಿ ಹೇರಿದ ಮಾಹಿತಿಯೇ ಇರಲಿಲ್ಲ. ತುರ್ತು ಪರಿಸ್ಥಿತಿ ಘೋಷಣೆಯನ್ನು ಯಾರೂ ಪ್ರಶ್ನೆ ಮಾಡುವಂತಿರಲಿಲ್ಲ. ಸಂವಿಧಾನವೇ ತಟಸ್ಥಗೊಂಡು ಅದಕ್ಕೆ ಬೆಲೆ ಇಲ್ಲದಾಯಿತು. ತುರ್ತು ಪರಿಸ್ಥಿತಿ ಹೇರಿದ್ದು ಸಂವಿಧಾನಕ್ಕೆ ಮಾಡಿದ ದೊಡ್ಡ ಅಪಚಾರ. ಈಗ ಅದೇ ಕಾಂಗ್ರೆಸಿಗರು ನಾವು ಸಂವಿಧಾನದ ರಕ್ಷಕರು ಎಂದು ಬೊಬ್ಬಿಡುತ್ತಿದ್ದಾರೆ ಎಂದರು.

ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಜಾತ್ಯಾತೀತ ಎಂಬ ಪದವೇ ಇರಲಿಲ್ಲ. ಜಾತ್ಯಾತೀತ ಪದವನ್ನು ಸಂವಿಧಾನದಲ್ಲಿ ಸೇರಿಸಬೇಕು ಎಂದು ಸಂವಿಧಾನ ಸಭೆಯಲ್ಲಿ ಪ್ರಸ್ತಾಪವಾದಾಗ ಅಂಬೇಡ್ಕರ್ ಅವರು ತಿರಸ್ಕರಿಸಿದ್ದರು. ಜಾತ್ಯಾತೀತತೆ ನಮ್ಮ ದೇಶದ ಸಂಸ್ಕೃತಿಯ ಭಾಗವೇ ಆಗಿದೆ ಎಂದಿದ್ದರು. ಇಂದಿರಾ ಗಾಂಧಿ ಅವರ ಜಾತ್ಯಾತೀತತೆಯಲ್ಲಿ ನಮಗೆ ನಂಬಿಕೆ ಇಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಕಾಂಗ್ರೆಸಿಗರು ಹೀನಮಾನವಾಗಿ ನಿಂದಿಸಿದ್ದಾರೆ, ಜರೆದಿದ್ದಾರೆ ಆದರೆ, ಇದುವರೆಗೆ ಯಾರೊಬ್ಬರನ್ನು ಜೈಲಿಗೆ ಹಾಕಿಲ್ಲ. ತುರ್ತು ಪರಿಸ್ಥಿತಿ ವೇಳೆ ಇಂದಿರಾ ಗಾಂಧಿ ಅವರನ್ನು ಪ್ರಶ್ನಿಸಿದ್ದ ೩೫೦ಕ್ಕೂ ಹೆಚ್ಚು ಪತ್ರಕರ್ತರನ್ನು, ಪತ್ರಿಕಾ ಸಂಪಾದಕರನ್ನು ಜೈಲಿಗೆ ಹಾಕಲಾಗಿತ್ತು. ಪ್ರೆಸ್ ಕೌನ್ಸಿಲ್ ಆಕ್ಟ್ ತೆಗೆದು ಹಾಕಲಾಗಿತ್ತು. ಇದನ್ನು ಕಾಂಗ್ರೆಸ್‌ಗೆ ನೆನೆಪಿಸಬೇಕು. ಅಂಬೇಡ್ಕರ್ ಅವರಿಗೆ ಸಂಬಂಧಿಸಿ ಐದು ಸ್ಥಳಗಳಲ್ಲಿ ಅಭಿವೃದ್ಧಿಪಡಿಸಿರುವುದು ಮೋದಿ ಸರಕಾರ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದು ಬಿಜೆಪಿ ಬೆಂಬಲಿತ ಸರಕಾರ. ಸಂಸತ್‌ನಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕಿದ್ದು ಮೋದಿ ಸರಕಾರ. ಸಂವಿಧಾನದ 106 ತಿದ್ದುಪಡಿಗಳಲ್ಲಿ 58 ತಿದ್ದುಪಡಿ ಮಾಡಿರುವುದು ಕಾಂಗ್ರೆಸ್ ಪಕ್ಷ ಹಾಗೂ ಗಾಂಧಿ ಕುಟುಂಬ ಎಂಬುದನ್ನು ಕಾಂಗ್ರೆಸ್‌ಗೆ  ಹೇಳಬೇಕಿದೆ ಎಂದು ಹೇಳಿದರು.

ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಮಾತನಾಡಿ, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ದಿನ ದೇಶಕ್ಕೆ ಕರಾಳ ದಿನವಾಗಿದೆ. ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ ದಿನವದು. ಅಕ್ರಮವಾಗಿ ಚುನಾವಣೆ ಗೆದ್ದ ಇಂದಿರಾ ಗಾಂಧಿ ನ್ಯಾಯಾಲಯದ ವಿರುದ್ಧ ಹೋರಾಡಲು ಸರಕಾರಿ ಯಂತ್ರವನ್ನು ಬಳಸಿಕೊಂಡಿದ್ದರು. ಅಧಿಕಾರಕ್ಕಾಗಿ ತಾನು, ಕಾಂಗ್ರೆಸ್ ಪಕ್ಷ ಯಾವ ಮಟ್ಟಕ್ಕಾದರೂ ಇಳಿಯುತ್ತದೆ ಎಂಬುದನ್ನು ನಿರೂಪಿಸಿದರು  ಎಂದರು.

ದ.ಕ. ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಚಾಲಕ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಸ್ವಾಗತಿಸಿದರು.

ರಾಕೇಶ್ ರೈ ಕಡೆಂಜಿ ಕಾರ್ಯಕ್ರಮ ನಿರೂಪಿಸಿದರು. ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮೊದಲಾದವರು ಭಾಗವಹಿಸಿದ್ದರು. ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ಮಾಡಿದವರನ್ನು ಗೌರವಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article